ADVERTISEMENT

ಮುಂಬೈ–ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗ: 12 ನದಿ ಸೇತುವೆ ಪೂರ್ಣ

ಪಿಟಿಐ
Published 3 ನವೆಂಬರ್ 2024, 14:33 IST
Last Updated 3 ನವೆಂಬರ್ 2024, 14:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಂಬೈ ಮತ್ತು ಅಹಮದಾಬಾದ್‌ ನಡುವೆ ನಿರ್ಮಿಸುತ್ತಿರುವ ಬುಲೆಟ್‌ ರೈಲು ಕಾರಿಡಾರ್‌ ವ್ಯಾಪ್ತಿ ಬರುವ ನದಿಗಳ ಮೇಲೆ ಒಟ್ಟು 20 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ 12 ಸೇತುವೆಗಳ ನಿರ್ಮಾಣವು ಪೂರ್ಣಗೊಂಡಿದೆ ಎಂದು ನ್ಯಾಷನಲ್‌ ಹೈಸ್ಪೀಡ್‌ ರೈಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಎನ್‌ಎಚ್‌ಎಸ್‌ಆರ್‌ಸಿಎಲ್‌) ತಿಳಿಸಿದೆ.

ಗುಜರಾತ್‌ನ ನವಸಾರಿ ಜಿಲ್ಲೆಯ ಖರೇರಾ ನದಿಯ ಮೇಲೆ ಬುಲೆಟ್‌ ರೈಲು ಮಾರ್ಗ ಹಾದುಹೋಗಲಿದೆ. ಈ ನದಿ ಮೇಲೆ 120 ಮೀಟರ್‌ ಉದ್ದದ ಸೇತುವೆ ನಿರ್ಮಾಣವು ಅಕ್ಟೋಬರ್‌ 29ರಂದು ಪೂರ್ಣಗೊಂಡಿದೆ. ಇದು ಪೂರ್ಣಗೊಂಡಿರುವ 12ನೇ ಸೇತುವೆಯಾಗಿದೆ ಎಂದು ವಿವರಿಸಿದೆ. 

ಬುಲೆಟ್‌ ರೈಲು ಮಾರ್ಗವು ಗುಜರಾತ್‌ನಲ್ಲಿ 352 ಕಿ.ಮೀ. ಹಾಗೂ ಮಹಾರಾಷ್ಟ್ರದಲ್ಲಿ 156 ಕಿ.ಮೀ. ದೂರವಿದೆ. ಮುಂಬೈ ಮತ್ತು ಅಹಮಬಾದ್‌ ನಡುವಿನ ರಸ್ತೆ ಸಂಚಾರವು 6ರಿಂದ 8 ಗಂಟೆ ತೆಗೆದುಕೊಳ್ಳಲಿದೆ. ಬುಲೆಟ್‌ ರೈಲಿನಲ್ಲಿ 3 ಗಂಟೆಗೆ ತಲು‍ಪಬಹುದಾಗಿದೆ.

ADVERTISEMENT

ವಾಪಿ ಮತ್ತು ಸೂರತ್‌ ನಿಲ್ದಾಣದ ನಡುವೆ ಬರುವ ನದಿಗಳ ಮೇಲೆ ಒಟ್ಟು ಒಂಬತ್ತು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಿಗಮವು ತಿಳಿಸಿದೆ.

ಖರೇರಾ ನದಿಯು ಅಂಬಿಕಾ ನದಿಯ ಉಪ ನದಿಯಾಗಿದೆ. ಗುಜರಾತ್‌ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ವಂಸ್ಡಾ ತಾಲ್ಲೂಕಿನ ಗಿರಿ ಪ್ರದೇಶದಲ್ಲಿ ಇದು ಹುಟ್ಟುತ್ತದೆ. ಈ ನದಿಯು ವಾ‍ಪಿ ನಿಲ್ದಾಣದಿಂದ 45 ಕಿ.ಮೀ ಹಾಗೂ ಬಿಲಿಮೊರಾ ನಿಲ್ದಾಣದ ನಡುವೆ 6 ಕಿ.ಮೀ. ದೂರ ಹರಿಯುತ್ತದೆ ಎಂದು ಮಾಹಿತಿ ನೀಡಿದೆ.

ಈಗಾಗಲೇ, ವಾಪಿ ಮತ್ತು ಸೂರತ್‌ ನಡುವೆ ಬರುವ ಪರ್, ಪೂರ್ಣಾ, ಮಿಂಧೋಲ, ಅಂಬಿಕಾ, ಔರಂಗ, ಕೋಲಕ್, ಕಾವೇರಿ ಮತ್ತು ವೆಂಗನಿಯಾ ನದಿಗಳ ಮೇಲೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ ಎಂದು ಹೇಳಿದೆ. 

ಒಟ್ಟಾರೆ ಈ ಯೋಜನೆಗೆ 1,389.5 ಹೆಕ್ಟೇರ್‌ ಭೂಮಿಯ ಅಗತ್ಯವಿದೆ. ಅಕ್ಟೋಬರ್‌ 21ರಂದು ಈ ಜಮೀನಿನ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದೆ. ಎಲ್ಲಾ ಸಿವಿಲ್‌, ಡಿಪೊ ನಿರ್ಮಾಣ ಸೇರಿದಂತೆ ಗುಜರಾತ್‌ ಭಾಗದಲ್ಲಿನ ರೈಲ್ವೆ ಮಾರ್ಗದ ಟೆಂಡರ್‌ ಪ್ರಕ್ರಿಯೆಯು ಪೂರ್ಣಗೊಂಡಿದೆ. ಎಲ್ಲಾ 12 ನಿಲ್ದಾಣಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದೆ.

21 ಕಿ.ಮೀ. ಸುರಂಗ ಮಾರ್ಗ

ಬುಲೆಟ್‌ ರೈಲು ಒಟ್ಟು 21 ಕಿ.ಮೀ.ನಷ್ಟು ದೂರ ಸುರಂಗ ಮಾರ್ಗದಲ್ಲಿ ಚಲಿಸಲಿದೆ. ಈ ಪೈಕಿ 7 ಕಿ.ಮೀ. ದೂರದಷ್ಟು ಸಮುದ್ರದ ತಳದಲ್ಲಿ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಈಗಾಗಲೇ ಇದರ ನಿರ್ಮಾಣ ಕಾರ್ಯ ಶುರುವಾಗಿದೆ. ಭಾರತದಲ್ಲಿ ಸಮುದ್ರದ ತಳದಲ್ಲಿ ರೈಲ್ವೆ ಸುರಂಗ ಮಾರ್ಗ ನಿರ್ಮಿಸುತ್ತಿರುವುದು ಇದೇ ಮೊದಲು ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್‌ ತಿಳಿಸಿದೆ.

ವೆಚ್ಚ ಎಷ್ಟು?

ದೇಶದ ಮೊದಲ ಬುಲೆಟ್‌ ರೈಲು ಯೋಜನೆಗೆ ಒಟ್ಟು ₹1.08 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಪೈಕಿ ಕೇಂದ್ರ ಸರ್ಕಾರವು ಎನ್‌ಎಚ್‌ಎಸ್‌ಆರ್‌ಸಿಎಲ್‌ಗೆ ₹10 ಸಾವಿರ ಕೋಟಿ ಅನುದಾನ ನೀಡಲಿದೆ. ಗುಜರಾತ್‌ ಮತ್ತು ಮಹಾರಾಷ್ಟ್ರ ಸರ್ಕಾರಗಳು ತಲಾ ₹5 ಸಾವಿರ ಕೋಟಿ ನೀಡಲಿವೆ. ಉಳಿದ ಹಣವನ್ನು ಜಪಾನ್‌ ದೇಶದಿಂದ ಶೇ 0.1ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.