ADVERTISEMENT

ಓಲಾಗೆ ಸಿಸಿಪಿಎ ಚಾಟಿ

ಆಟೊ ಪ್ರಯಾಣಕ್ಕೆ ರಶೀದಿ ನೀಡಲು ಸೂಚನೆ

ಪಿಟಿಐ
Published 13 ಅಕ್ಟೋಬರ್ 2024, 15:50 IST
Last Updated 13 ಅಕ್ಟೋಬರ್ 2024, 15:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಓಲಾ ಆಟೊದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಶೀದಿ ನೀಡುವಂತೆ ಓಲಾ ಕಂಪನಿಗೆ, ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಭಾನುವಾರ ಸೂಚಿಸಿದೆ.

ಪ್ರಯಾಣಿಕರು ಕ್ರಮಿಸಿದ ದೂರಕ್ಕಿಂತಲೂ ಓಲಾ ಆ್ಯಪ್‌ನಲ್ಲಿ ಹೆಚ್ಚು ಬಿಲ್‌ ತೋರಿಸಲಾಗುತ್ತದೆ. ಗ್ರಾಹಕರು ಪಾವತಿಸಿದ ಅಧಿಕ ಶುಲ್ಕವನ್ನು ಕಂಪನಿಯು ಮರಳಿಸುವುದಿಲ್ಲ. ಇದಕ್ಕೆ ಬದಲಾಗಿ ಕೂಪನ್‌ ಕೋಡ್‌ ನೀಡುತ್ತಿದೆ. ಗ್ರಾಹಕರು ಈ ಕೋಡ್‌ ಬಳಸಿ ಮತ್ತೊಮ್ಮೆ ಸಂಚರಿಸಲು ಅವಕಾಶ ಸಿಗಲಿದೆ.

ಕಂಪನಿಯು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ಹೆಚ್ಚುವರಿ ಹಣವನ್ನು ಮರು‍ಪಾವತಿಸುತ್ತಿಲ್ಲ. ಆ್ಯಪ್‌ ಮೂಲಕ ಆಟೊ ಬುಕಿಂಗ್‌ ಮಾಡಿದ ಎಲ್ಲಾ ಗ್ರಾಹಕರಿಗೂ ರಶೀದಿ ಅಥವಾ ಇನ್‌ವಾಯ್ಸ್‌ ನೀಡಬೇಕು. ಇದನ್ನು ನೀಡದಿರುವುದು ಗ್ರಾಹಕ ರಕ್ಷಣಾ ಕಾಯ್ದೆ 2019ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು  ಪ್ರಾಧಿಕಾರ ಹೇಳಿದೆ.‌

ADVERTISEMENT

ಭವೀಶ್‌ ಅಗರ್ವಾಲ್‌ ಒಡೆತನದ ಓಲಾ ಕಂಪನಿಯು ಗ್ರಾಹಕರಿಗೆ ಹಣ ಮರುಪಾವತಿ ಸಂಬಂಧ ಪ್ರಶ್ನಾತೀತ ನೀತಿಯನ್ನು ಅಳವಡಿಸಿಕೊಂಡಿದೆ. ನೊಂದ ಗ್ರಾಹಕರಿಗೆ ಪರಿಹಾರ ಸಿಗುತ್ತಿಲ್ಲ ಎಂದು ಹೇಳಿದೆ.

ಗ್ರಾಹಕರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಬೇಕು ಅಥವಾ ಕೂಪನ್‌ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಎಚ್ಚೆತ್ತುಕೊಂಡ ಕಂಪನಿ:

ಸಿಸಿಪಿಎ ಸೂಚನೆ ನೀಡಿದ ಬೆನ್ನಲ್ಲೇ ಓಲಾ ಕಂಪನಿಯು ತನ್ನ ಕಾರ್ಯಾಚರಣೆಯಲ್ಲಿ ಹಲವು ಬದಲಾವಣೆಗೆ ಕ್ರಮಕೈಗೊಡಿದೆ.

ವೆಬ್‌ಸೈಟ್‌ನಲ್ಲಿ ಗ್ರಾಹಕರ ಕುಂದುಕೊರತೆ ಆಲಿಸುವ ಸಂಬಂಧ ನೋಡಲ್‌ ಅಧಿಕಾರಿಗಳ ಮಾಹಿತಿ ನೀಡಿದೆ. ಪ್ರಯಾಣ ರದ್ದತಿಗೆ ಸಂಬಂಧಿಸಿದಂತೆ ಮತ್ತಷ್ಟು ಕಾರಣಗಳನ್ನು ಪ್ರಕಟಿಸಿದೆ. 

ಎಷ್ಟು ಸಮಯಕ್ಕೆ ಮೊದಲು ಪ್ರಯಾಣ ರದ್ದತಿ ಮಾಡಬೇಕು, ಇದಕ್ಕೆ ಶುಲ್ಕ ಎಷ್ಟು ಕಡಿತವಾಗಲಿದೆ ಎಂಬ ಬಗ್ಗೆ ವಿವರ ನೀಡಿದೆ. ಕಿಲೊಮೀಟರ್‌ಗೆ ಅನುಗುಣವಾಗಿ ದರ ಪಟ್ಟಿ ಪ್ರಕಟಿಸಿದೆ. ಚಾಲಕರ ಕಾಯುವ ಸಮಯಕ್ಕೆ ಗ್ರಾಹಕರು ಎಷ್ಟು ಶುಲ್ಕ ಪಾವತಿಸಬೇಕಿದೆ ಎಂಬ ಬಗ್ಗೆಯೂ ವಿವರ ನೀಡಿದೆ.

2061 ದೂರು ದಾಖಲು

ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್‌ 9ರ ವರೆಗೆ ಓಲಾ ಸೇವೆ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಡಿ 2061 ದೂರುಗಳು ದಾಖಲಾಗಿವೆ. ದುಬಾರಿ ದರ ವಿಧಿಸಲಾಗುತ್ತಿದೆ. ಹಣ ಮರುಪಾವತಿಗೆ ವಿಳಂಬ ಮಾಡಲಾಗುತ್ತಿದೆ. ಚಾಲಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಗ್ರಾಹಕರು ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.