ADVERTISEMENT

ಇಳಿಯುತ್ತಿದೆ ಅಡುಗೆ ಎಣ್ಣೆ ಬೆಲೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 19:45 IST
Last Updated 17 ಜೂನ್ 2022, 19:45 IST
   

ಬೆಂಗಳೂರು: ಸಗಟು ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆಯು ಲೀಟರಿಗೆ ₹ 10ರವರೆಗೆ ಇಳಿಕೆ ಆಗಿದೆ. ಅಲ್ಲದೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ಲೀಟರಿಗೆ ₹ 6ರಿಂದ ₹ 8ರವರೆಗೆ ಇಳಿಕೆ ಆಗಿದೆ. ಇದು ಹದಿನೈದು ದಿನಗಳಲ್ಲಿ ಆಗಿರುವ ಇಳಿಕೆ.

ಇಂಡೊನೇಷ್ಯಾ ಸರ್ಕಾರವು ತಾಳೆ ಎಣ್ಣೆ ರಫ್ತು ನಿರ್ಬಂಧ ಹಿಂದಕ್ಕೆ ಪಡೆದಿರುವುದು, ಕಚ್ಚಾ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದಿಗೆ ಸೀಮಾ ಸುಂಕ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ನಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿರುವುದೂ ಬೆಲೆ ತಗ್ಗಲು ಕಾರಣವಾಗಿದೆ ಎಂದು ಉದ್ಯಮದ ಮೂಲಗಳು ಹೇಳಿವೆ.

‘ಕಚ್ಚಾ ಸೂರ್ಯಕಾಂತಿ ಎಣ್ಣೆಯ ಆಮದು ಸುಗಮವಾಗುತ್ತಿರುವ ಕಾರಣ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಪ್ರತಿ ಲೀಟರಿಗೆ ₹35ರಷ್ಟು ಕಡಿಮೆ ಮಾಡಲಾಗಿದೆ’ ಎಂದು ಜೆಮಿನಿ ಎಡಿಬಲ್ಸ್ ಆ್ಯಂಡ್ ಫ್ಯಾಟ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ತಿಳಿಸಿದೆ. ಕಂಪನಿಯು ಫ್ರೀಡಂ ರಿಫೈನ್ಡ್‌ ಸೂರ್ಯಕಾಂತಿ ಎಣ್ಣೆಯನ್ನು ಮಾರಾಟ ಮಾಡುತ್ತಿದೆ.

ADVERTISEMENT

‘ಉಕ್ರೇನ್–ರಷ್ಯಾ ಯುದ್ಧದ ಕಾರಣದಿಂದಾಗಿ ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದಿಗೆ ತೊಡಕು ಎದುರಾಗಿತ್ತು. ಇದರಿಂದಾಗಿ ಸೂರ್ಯಕಾಂತಿ ಎಣ್ಣೆಯ ಬೆಲೆಯು ಹೆಚ್ಚಾಗಿತ್ತು. ಈಗ ಪರಿಸ್ಥಿತಿ ತಿಳಿಯಾಗುತ್ತಿದ್ದು, ಕೆಲವು ವಾರಗಳಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆ ಮತ್ತೆ ಆರಂಭವಾಗಿದೆ’ ಎಂದು ಕಂಪನಿ ಹೇಳಿದೆ.

ಸೂರ್ಯಕಾಂತಿ ಎಣ್ಣೆಯ ಬೆಲೆಯು ಎರಡು ತಿಂಗಳ ಹಿಂದೆ ಸಗಟುಮಾರುಕಟ್ಟೆಯಲ್ಲಿ ಲೀಟರಿಗೆ ₹ 190ಕ್ಕೆ (ತೆರಿಗೆ ಹೊರತು‍ಪಡಿಸಿ) ತಲುಪಿತ್ತು. ಅದಕ್ಕೆ ಹೋಲಿಸಿದರೆ ಈಗ ಬೆಲೆ ₹ 18ರಷ್ಟು ಕಡಿಮೆ ಆಗಿದೆ ಎಂದು ಉದ್ಯಮದ ಮೂಲಗಳು ಹೇಳಿವೆ.

ರಷ್ಯಾ ಮತ್ತು ಅರ್ಜೆಂಟೀನಾ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆ ರಫ್ತಿಗೆ ಒತ್ತು ನೀಡುತ್ತಿವೆ. ಉಕ್ರೇನ್‌ನ ಕೆಲವುಪ್ರದೇಶಗಳಿಂದಲೂ ಸೂರ್ಯಕಾಂತಿ ಎಣ್ಣೆ ರಫ್ತು ಮತ್ತೆ ಶುರುವಾಗಿರುವ ಮಾಹಿತಿ ಇದೆ. ಈ ಕಾರಣಗಳಿಂದಾಗಿ ಅಡುಗೆ ಎಣ್ಣೆ ಬೆಲೆ ಇಳಿಕೆ ಆಗುತ್ತಿದೆಎಂದು ಅಧಿಕಾರಿಯೊಬ್ಬರು
ತಿಳಿಸಿದರು.

ಇನ್ನು ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆಗಳ ಬೆಲೆಯು ರಷ್ಯಾ–ಉಕ್ರೇನ್‌ ಯುದ್ಧ ಶುರುವಾಗು ವುದಕ್ಕೂ ಮೊದಲು ಇದ್ದ ಮಟ್ಟಕ್ಕೆ ಬರುವ ಅಂದಾಜು ಇದೆ ಎಂದು ಬೆಂಗಳೂರಿನ ಸಗಟು ವರ್ತಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.