ADVERTISEMENT

ಹಬ್ಬದ ಋತು: ಖಾದ್ಯ ತೈಲ ಬೆಲೆ ದಿಢೀರ್‌ ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 0:30 IST
Last Updated 27 ಸೆಪ್ಟೆಂಬರ್ 2024, 0:30 IST
   

ಬೆಂಗಳೂರು: ಹಬ್ಬದ ಋತುವಿನಲ್ಲಿ ಅಡುಗೆ ಎಣ್ಣೆಯ ಚಿಲ್ಲರೆ ದರವು ಪ್ರತಿ ಕೆ.ಜಿಗೆ ₹15ರಿಂದ ₹20 ಏರಿಕೆಯಾಗಿದೆ. 

ಮನೆ ಹಾಗೂ ಹೋಟೆಲ್‌ಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆ ಬಳಸಲಾಗುತ್ತದೆ. ಸೂರ್ಯಕಾಂತಿ ಎಣ್ಣೆ ದರವು ಪ್ರತಿ ಕೆ.ಜಿಗೆ ₹110ರಿಂದ ₹130ಕ್ಕೆ ಹೆಚ್ಚಳವಾಗಿದೆ. ಶೇಂಗಾ ಎಣ್ಣೆ ಕೆ.ಜಿಗೆ ₹145ರಿಂದ ₹160ಕ್ಕೆ ಏರಿಕೆಯಾಗಿದೆ. ಸೋಯಾಬಿನ್ ಮತ್ತು ತಾಳೆ ಎಣ್ಣೆಯ ದರವು ಕೆ.ಜಿಗೆ ₹15 ಹೆಚ್ಚಳವಾಗಿದೆ.

ಹಬ್ಬದ ಋತುವಿನಲ್ಲಿ ಖಾದ್ಯ ತೈಲದ ಬಳಕೆ ಪ್ರಮಾಣ ಹೆಚ್ಚಿರುತ್ತದೆ. ಸರ್ಕಾರವು ಖಾದ್ಯ ತೈಲದ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಏರಿಕೆ ಮಾಡಿರುವುದರಿಂದ ಚಿಲ್ಲರೆ ದರದಲ್ಲಿ ಹೆಚ್ಚಳವಾಗಿದೆ. ಮುಂಬರುವ ವಾರಗಳಲ್ಲಿ ಧಾರಣೆಯು ಮತ್ತಷ್ಟು ಏರಿಕೆಯಾಗಲಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಹೇಳುತ್ತಾರೆ.

ADVERTISEMENT

ಸರ್ಕಾರ ಹೇಳಿದ್ದೇನು?

ಎರಡು ವಾರದ ಹಿಂದೆ ಕೇಂದ್ರ ಸರ್ಕಾರವು ಕಚ್ಚಾ ಮತ್ತು ಸಂಸ್ಕರಿಸಿದ ತಾಳೆ, ಸೋಯಾಬಿನ್‌ ಹಾಗೂ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಹೆಚ್ಚಿಸಿತ್ತು. ದೇಶೀಯ ರೈತರಿಗೆ ಅನುಕೂಲ ಕಲ್ಪಿಸಲು ಈ ನಿರ್ಧಾರ ಕೈಗೊಂಡಿತ್ತು.

ಕಡಿಮೆ ಕಸ್ಟಮ್ಸ್‌ ಸುಂಕ ಜಾರಿಯಲ್ಲಿದ್ದ ವೇಳೆ ಆಮದು ಮಾಡಿಕೊಂಡಿರುವ 30 ಲಕ್ಷ ಟನ್‌ ಅಡುಗೆ ಎಣ್ಣೆ ದಾಸ್ತಾನಿದೆ. ಇದು 40ರಿಂದ 45 ದಿನದವರೆಗೆ ದೇಶೀಯ ಬೇಡಿಕೆಗೆ ಸಾಕಾಗಲಿದೆ. ಹಾಗಾಗಿ, ಕಂಪನಿಗಳು ದರ ಏರಿಕೆ ಮಾಡಬಾರದು ಎಂದು ಸೂಚಿಸಿತ್ತು.

ಈ ನಿಟ್ಟಿನಲ್ಲಿ ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ), ಭಾರತೀಯ ಸಸ್ಯಜನ್ಯ ತೈಲ ಉತ್ಪಾದಕರ ಸಂಘ ಮತ್ತು ಸೋಯಾಬಿನ್‌ ಎಣ್ಣೆ ಉತ್ಪಾದಕರ ಸಂಘದ ಪ್ರತಿನಿಧಿಗಳ ಕೂಡ ಸಭೆ ನಡೆಸಿತ್ತು. ಕೇಂದ್ರದ ಸೂಚನೆ ಬೆನ್ನಲ್ಲೇ ಕಂಪನಿಗಳು ದಿಢೀರ್‌ ಆಗಿ ದರ ಏರಿಕೆ ಮಾಡಿವೆ.

ಭಾರತಕ್ಕೆ ಮಲೇಷ್ಯಾ ಮತ್ತು ಇಂಡೊನೇಷ್ಯಾದಿಂದ ತಾಳೆ ಎಣ್ಣೆಯು ಆಮದಾಗುತ್ತದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾಬಿನ್ ಪೂರೈಕೆಯಾಗುತ್ತದೆ. ರಷ್ಯಾ ಮತ್ತು ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. 

ಸಿಹಿ ಪದಾರ್ಥಗಳ ದರ ಏರಿಕೆ?

ಹಬ್ಬದ ಋತುವಿನಲ್ಲಿ ಬೇಕರಿ ಹೋಟೆಲ್‌ಗಳಲ್ಲಿ ಹೆಚ್ಚಾಗಿ ಸಿಹಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲ ಬಳಕೆಯಾಗುತ್ತದೆ.  ಬೆಲೆ ಏರಿಕೆಯನ್ನು ಸರಿದೂಗಿಸಲು ಅಂಗಡಿ ಮಾಲೀಕರು ಸಿಹಿ ತಿನಿಸುಗಳ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ.  ಚಿಪ್ಸ್‌ ತಯಾರಿಕೆಯಲ್ಲಿಯೂ ಹೆಚ್ಚಾಗಿ ಎಣ್ಣೆ ಬಳಲಾಗುತ್ತದೆ. ಹಾಗಾಗಿ ಚಿಪ್ಸ್‌ ದರದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಸಹಜವಾಗಿ ಅಡುಗೆ ಎಣ್ಣೆ ಬೆಲೆಯು ಕೆ.ಜಿ ₹1ರಿಂದ ₹2 ಏರಿಕೆಯಾಗುತ್ತಿತ್ತು. ಏಕಾಏಕಿ ಕೆ.ಜಿಗೆ ₹20 ಹೆಚ್ಚಳವಾಗಿದೆ. ಇದರಿಂದ ಹೋಟೆಲ್‌ಗಳು ಕೂಡ ತಿಂಡಿ ಊಟದ ದರ ಏರಿಕೆ ಮಾಡುವ ಸಾಧ್ಯತೆಯಿದೆ.  ತಕ್ಷಣದಲ್ಲಿ ದೊಡ್ಡ ಹೋಟೆಲ್‌ಗಳು ದರ ಏರಿಕೆಗೆ ಮುಂದಾಗದಿದ್ದರೂ ಸಣ್ಣ ಹೋಟೆಲ್‌ಗಳು ಆರ್ಥಿಕ ಹೊರೆಯನ್ನು ಸರಿದೂಗಿಸಿಕೊಳ್ಳಲು ದರ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ‘ಅಡುಗೆ ಎಣ್ಣೆ ದರ ಏರಿಕೆಯು ತಾತ್ಕಾಲಿಕವಷ್ಟೇ. ಒಂದೆರಡು ಪದಾರ್ಥಗಳ ಬೆಲೆ ಏರಿಕೆಯಾದ ತಕ್ಷಣ ಯಾವುದೇ ತಿಂಡಿ ಮತ್ತು ಊಟದ ಬೆಲೆ ಏರಿಕೆ ಮಾಡುವ ಉದ್ದೇಶ ಹೊಂದಿಲ್ಲ. ಜನಸಾಮಾನ್ಯರ ಮೇಲೆ ಹೊರೆ ಹೇರುವುದಿಲ್ಲ’ ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಗೌರವಾಧ್ಯಕ್ಷ ಕೆ.ಸಿ. ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.