ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳದಿರುವುದರಿಂದ ಬುಧವಾರ ಉಂಡೆ ಕೊಬ್ಬರಿ ಖರೀದಿಗೆ ರೈತರ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಲಿಲ್ಲ. ಹಾಗಾಗಿ, ಬೆಳಿಗ್ಗೆಯೇ ಕೇಂದ್ರಕ್ಕೆ ಬಂದಿದ್ದ ನೂರಾರು ರೈತರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು.
ಅಗತ್ಯ ತಾಂತ್ರಿಕ ಸಿಬ್ಬಂದಿ, ಕಂಪ್ಯೂಟರ್, ಇಂಟರ್‌ನೆಟ್ ಸೇವೆ ಕಲ್ಪಿಸದೆ ಏಕಾಏಕಿ ನೋಂದಣಿ ಆರಂಭಿಸುವುದಾಗಿ ಪ್ರಕಟಿಸಿದ ತೋಟಗಾರಿಕೆ ಸಚಿವರ ವಿರುದ್ಧ ರೈತರಿಂದ ಆಕ್ರೋಶ ವ್ಯಕ್ತವಾಯಿತು.
ರೈತರ ಹೆಸರಲ್ಲಿ ವರ್ತಕರು ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದ್ದರಿಂದ ಸರ್ಕಾರ ಹಳೆಯ ನೋಂದಣಿಯನ್ನು ರದ್ದುಪಡಿಸಿದ್ದು, ಹೊಸ ನೋಂದಣಿಗೆ 45 ದಿನಗಳ ಕಾಲಾವಕಾಶ ನೀಡಿದೆ.
ಜಿಲ್ಲಾಮಟ್ಟದಲ್ಲಿ ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಭೆ ನಡೆಸಿ ವರದಿ ಸಲ್ಲಿಸಿದ ಬಳಿಕ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ರೈತರ ಹೆಸರು ನೋಂದಣಿ ಆರಂಭವಾಗಲಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಒಂದು ವಾರ ಬೇಕಿದೆ. ಆ ನಂತರವೇ ನೋಂದಣಿ ಶುರುವಾಗಲಿದೆ ಎಂದು ಮಹಾಮಂಡಳದ ಅಧಿಕಾರಿಗಳು ತಿಳಿಸಿದ್ದಾರೆ.
30 ಲಕ್ಷ ಕ್ವಿಂಟಲ್ ದಾಸ್ತಾನು: ಪ್ರಸಕ್ತ ಋತುವಿನಡಿ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಒಟ್ಟು 6.25 ಲಕ್ಷ ಕ್ವಿಂಟಲ್ (62,500 ಟನ್) ಕೊಬ್ಬರಿ ಖರೀದಿಗೆ ನಿರ್ಧರಿಸಿದೆ. ಆದರೆ, ರೈತರ ಬಳಿ 30 ಲಕ್ಷ ಕ್ವಿಂಟಲ್ನಷ್ಟು ಕೊಬ್ಬರಿ ದಾಸ್ತಾನು ಇದೆ ಎಂದು ಮಹಾಮಂಡಳದ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕೇಂದ್ರವು ರಾಜ್ಯದಲ್ಲಿ ಉತ್ಪಾದನೆಯಾಗುವ ಶೇ 25ರಷ್ಟನ್ನು ಮಾತ್ರ ಖರೀದಿಸಲಿದೆ. ಉತ್ಪಾದನಾ ಪ್ರಮಾಣದ ಶೇ 50ರಷ್ಟನ್ನು ಖರೀದಿಸಬೇಕು. ಕೇರಳ, ತಮಿಳುನಾಡಿಗೆ ನಿಗದಿಪಡಿಸಿರುವ ಮಾನದಂಡವನ್ನೇ ಕರ್ನಾಟಕಕ್ಕೂ ಅನ್ವಯಿಸಬಾರದು ಎಂದು ಪತ್ರ ಬರೆಯಲಾಗಿದೆ. ಆದರೆ, ಇದಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ.
ಖರೀದಿ ಯಾವಾಗ: ‘ಮಹಾಮಂಡಳಗಳ ಪೋರ್ಟಲ್‌ನಲ್ಲಿ ನೋಂದಣಿಯಾದ ಕೊಬ್ಬರಿ ಬೆಳೆಗಾರರ ದತ್ತಾಂಶವು ನಾಫೆಡ್‌ನ ಇ–ಸಮೃದ್ಧಿ ಪೋರ್ಟಲ್‌ಗೆ ರವಾನೆಯಾದ ನಂತರ ಖರೀದಿಯನ್ನು ಆರಂಭಿಸಲಾಗುತ್ತದೆ’ ಎಂದು ನಾಫೆಡ್‌ನ ರಾಜ್ಯ ಮುಖ್ಯಸ್ಥೆ ಜ್ಯೋತಿ ಪಾಟೀಲ್ ತಿಳಿಸಿದ್ದಾರೆ.
ಹೋಬಳಿಮಟ್ಟದಲ್ಲೂ ಖರೀದಿ ಕೇಂದ್ರ ತೆರೆಯಬೇಕು. ಕೇಂದ್ರದಲ್ಲಿ ಕನಿಷ್ಠ ನಾಲ್ಕು ಕಂಪ್ಯೂಟರ್‌ಗಳು ಹಾಗೂ ಬೆರಳಚ್ಚು ಯಂತ್ರ ಇಟ್ಟರೆ ರೈತರ ದಟ್ಟಣೆ ತಪ್ಪಿಸಬಹುದು–ದಿನೇಶ್, ರೈತ ಯಳಗೊಂಡನಹಳ್ಳಿ ಕಡೂರು ತಾಲ್ಲೂಕು
ಎಲ್ಲೆಲ್ಲಿ ಖರೀದಿ? ತುಮಕೂರು ಮೈಸೂರು ಚಾಮರಾಜನಗರ ಹಾಸನ ಚಿಕ್ಕಮಗಳೂರು ಚಿತ್ರದುರ್ಗ ಮಂಡ್ಯ ಮೈಸೂರು ದಕ್ಷಿಣ ಕನ್ನಡ ರಾಮನಗರ
ಬೆಳೆಗಾರರಿಗೆ ನಿರಾಸೆ
ಚಿಕ್ಕಮಗಳೂರು: ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂಬ ಸುದ್ದಿ ತಿಳಿದು ಜಿಲ್ಲೆಯ ಕಡೂರಿನ ನೋಂದಣಿ ಕೇಂದ್ರಕ್ಕೆ ಬಂದಿದ್ದ ನೂರಾರು ರೈತರು ನಿರಾಸೆಯಿಂದ ಮನೆಯತ್ತ ತೆರಳಿದರು. ಜಿಲ್ಲಾಧಿಕಾರಿಯಿಂದ ಆದೇಶ ಬಂದ ಬಳಿಕ ನೋಂದಣಿಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಎಪಿಎಂಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ರೈತರ ನಿರಾಸಕ್ತಿ: ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ಬೆಳೆಗಾರರು ಬೆಂಬಲ ಬೆಲೆಯಡಿ ಕೊಬ್ಬರಿ ಮಾರಾಟಕ್ಕೆ ಅಷ್ಟಾಗಿ ತೋರಿಸುತ್ತಿಲ್ಲ. ‘ಜಿಲ್ಲೆಯಲ್ಲಿ ಈಚೆಗೆ ನಡೆದ ಬೆಳೆಗಾರರ ನೋಂದಣಿ ವೇಳೆ ಐದಾರು ಮಂದಿ ಮಾತ್ರ ಈ ಬಗ್ಗೆ ವಿಚಾರಿಸಿದ್ದರು. ಇಬ್ಬರು ರೈತರ ಹೊರತಾಗಿ ಯಾರೂ ಮಾರಾಟಕ್ಕೆ ಆಸಕ್ತಿ ತೋರಿಸಿಲ್ಲ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಉಂಡೆ ಕೊಬ್ಬರಿಯೊಳಗೆ ತೇವಾಂಶ ಸೇರಿ ಅದು ಹಾಳಾಗುತ್ತದೆ. ಅದರ ಬದಲು ಇಲ್ಲಿನ ಬೆಳೆಗಾರರು ಮಿಲ್ಲಿಂಗ್ ಕೊಬ್ಬರಿ ಮಾಡಿ ನೇರವಾಗಿ ಗಾಣಗಳಿಗೆ ಒಯ್ದು ತೆಂಗಿನ ಎಣ್ಣೆ ಮಾಡಿಸುತ್ತಾರೆ. ಇಲ್ಲವಾದರೆ ಸಿಪ್ಪೆ ಕೊಬ್ಬರಿಯನ್ನು ಮಾರಾಟ ಮಾಡುತ್ತಾರೆ’ ಎಂದು ವಿವರಿಸಿದರು.
ಖರೀದಿ ಪ್ರಮಾಣ ಕಡಿತಕ್ಕೆ ಆಕ್ಷೇಪ
ಹಾಸನ: ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಕೊಬ್ಬರಿ ಖರೀದಿಸುವುದಾಗಿ ಕೇಂದ್ರ ಸರ್ಕಾರವು ಈ ಹಿಂದೆ ಪ್ರಕಟಿಸಿತ್ತು. ಹೊಸ ಆದೇಶದಲ್ಲಿ 15 ಕ್ವಿಂಟಲ್‌ಗೆ ಇಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ತೆಂಗು ಬೆಳೆಗಾರರ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ‘ರೈತರ ಬಳಿ ದಾಸ್ತಾನಿರುವ ಕೊಬ್ಬರಿ ಪೈಕಿ ಶೇ 50ರಷ್ಟನ್ನು ಖರೀದಿಸಬೇಕು’ ಎಂದು ಸಮಿತಿಯ ಅಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಒತ್ತಾಯಿಸಿದ್ದಾರೆ. ಹೊಸ ತಂತ್ರಾಂಶ ಅಳವಡಿಕೆ: ‘ಈ ಹಿಂದೆ ಹೆಚ್ಚು ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಅಂತರ ಜಿಲ್ಲೆಯವರ ಹೆಸರನ್ನು ನೋಂದಾಯಿಸಿರುವುದು ಪತ್ತೆಯಾಗಿದೆ. ಹೊಸ ತಂತ್ರಾಂಶ ಸಿದ್ಧಪಡಿಸಲು ಒಂದು ವಾರ ಬೇಕಿದೆ. ಆಯಾ ಜಿಲ್ಲೆಯವರು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ನೋಂದಣಿ ಮಾಡಿಸಲು ಅನುಕೂಲವಾಗುವಂತಹ ತಂತ್ರಾಂಶವನ್ನು ರೂಪಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ನಿಗದಿಯಾಗದ ದಿನಾಂಕ
ತುಮಕೂರು: ಜಿಲ್ಲೆಯಲ್ಲಿ ರೈತರ ಹೆಸರು ನೋಂದಣಿ ಸಂಬಂಧ ಜಿಲ್ಲಾಡಳಿತ ಸಭೆ ನಡೆಸಿದರೂ ದಿನಾಂಕವನ್ನು ನಿಗದಿಪಡಿಸಿಲ್ಲ. ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆಯಿಂದ ಬರುವ ನಿರ್ದೇಶನ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು (ಎಪಿಎಂಸಿಗೆ) ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಎಪಿಎಂಸಿ ಬಳಿ ಸಿಬ್ಬಂದಿ ಹಾಗೂ ಕಂಪ್ಯೂಟರ್ ಕೊರತೆ ಇದ್ದು ಮೂಲ ಸೌಕರ್ಯ ಒದಗಿಸಿದ ನಂತರವೇ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.