ನವದೆಹಲಿ: ಎಂಟು ಪ್ರಮುಖ ಕೈಗಾರಿಕಾ ವಲಯಗಳು ಮಾರ್ಚ್ ತಿಂಗಳಲ್ಲಿ ಶೇಕಡ 6.8ರಷ್ಟು ಬೆಳವಣಿಗೆ ಕಂಡಿವೆ. ಇದು 32 ತಿಂಗಳುಗಳ ಗರಿಷ್ಠ ಬೆಳವಣಿಗೆ.
ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನಾವಲಯಗಳ ಮಾರ್ಚ್ ತಿಂಗಳ ಬೆಳವಣಿಗೆ ಪ್ರಮಾಣವು ಹಿಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಶೇ (–)8.6 ಆಗಿತ್ತು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ನೈಸರ್ಗಿಕ ಅನಿಲ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನಾ ವಲಯಗಳಲ್ಲಿನ ಉತ್ಪಾದನೆಯ ಪ್ರಮಾಣದಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕ್ರಮವಾಗಿ ಶೇ 12.3, ಶೇ 23, ಶೇ 32.5 ಮತ್ತು ಶೇ 21.6ರಷ್ಟು ಬೆಳವಣಿಗೆ ಆಗಿದೆ. ಈ ವಲಯಗಳು ಹಿಂದಿನ ವರ್ಷದ ಇದೇ ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದವು.
ಕಲ್ಲಿದ್ದಲು, ಕಚ್ಚಾತೈಲ, ಸಂಸ್ಕರಣಾ ಉತ್ಪನ್ನಗಳು ಮತ್ತು ರಸಗೊಬ್ಬರ ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.
2020-21ನೆಯ ಆರ್ಥಿಕ ವರ್ಷದಲ್ಲಿ ಈ ಎಂಟು ವಲಯಗಳು ಶೇ (–) 7ರಷ್ಟು ಕುಸಿತ ಕಂಡಿವೆ. 2019–20ರಲ್ಲಿ ಈ ವಲಯಗಳಲ್ಲಿ ಶೇ 0.4ರ ಬೆಳವಣಿಗೆ ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.