ಕೋವಿಡ್–19 ಸಾಂಕ್ರಾಮಿಕದಿಂದಾಗಿ ಭಾರತದ ಆರ್ಥಿಕತೆಯು ಸತತ ಎರಡು ತ್ರೈಮಾಸಿಕಗಳಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿದೆ. ಶೂನ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಬೆಳವಣಿಗೆ ಕಂಡಿರುವುದು ಇದೇ ಮೊದಲ ಬಾರಿ. ಏಪ್ರಿಲ್–ಜೂನ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇಕಡ (–)23.9ರಷ್ಟು ಇತ್ತು. ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಅದು ಶೇ (–)7.6ರಷ್ಟಾಗಿದೆ. ಕುಸಿತದ ಪ್ರಮಾಣ ತಗ್ಗಿದೆ ಎನ್ನುವುದಷ್ಟೇ ಸಮಾಧಾನ ತರುವ ಅಂಶ. ಸತತ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿ ದರವು ಶೂನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದ ಪರಿಣಾಮ, ಭಾರತವು ‘ತಾಂತ್ರಿಕ ಹಿಂಜರಿತ’ದ ಸ್ಥಿತಿಗೆ ಜಾರಿತು.
ಲಾಕ್‌ಡೌನ್ ನಿರ್ಬಂಧಗಳು ತೆರವಾಗಿರುವುದರಿಂದ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಕಂಪನಿಗಳು ನೇಮಕಾತಿ, ಹೂಡಿಕೆ ಯೋಜನೆಗಳ ಕಡೆ ಗಮನ ಹರಿಸುತ್ತಿವೆ. ಹಳಿಗೆ ಮರಳುತ್ತಿರುವ ಕೈಗಾರಿಕಾ ಉತ್ಪಾದನೆ, ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ 6.93ಕ್ಕೆ ಇಳಿಕೆ ಕಂಡಿರುವುದು ಸಕಾರಾತ್ಮಕ ಬೆಳವಣಿಗೆಯ ಸೂಚನೆ ನೀಡಿವೆ. ಆದರೆ, ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಅಕ್ಟೋಬರ್‌ನಲ್ಲಿ ಕಡಿಮೆ ಆಗಿರುವುದು ಕಳವಳಕ್ಕೆ ಕಾರಣವಾಗಿದೆ.
ಹಿಂಜರಿತದ ನಡುವೆ ಸೆನ್ಸೆಕ್ಸ್ ದಾಖಲೆ
‘ಜನರ ಬದುಕು ಕಷ್ಟಕ್ಕೆ ಸಿಲುಕಿದಾಗ, ಷೇರು ಮಾರುಕಟ್ಟೆಗಳು ಹೊಸ ಎತ್ತರಕ್ಕೆ ಜಿಗಿಯುತ್ತ ಇರುತ್ತವೆ’ ಎಂಬ ಮಾತನ್ನು ಕೆಲವರು ತಮಾಷೆಯಿಂದಲೂ ಇನ್ನು ಕೆಲವರು ಗಂಭೀರವಾಗಿಯೂ ಹೇಳುವುದಿದೆ. ಫೆಬ್ರುವರಿ ಮಧ್ಯಭಾಗದಲ್ಲಿ 41 ಸಾವಿರ ಅಂಶಗಳ ಆಸುಪಾಸಿನಲ್ಲಿದ್ದ ಸೆನ್ಸೆಕ್ಸ್, ಲಾಕ್‌ಡೌನ್ ಜಾರಿಗೆ ಬಂದ ನಂತರದಲ್ಲಿ 27,500 ಅಂಶಗಳಿಗೆ ಕುಸಿಯಿತು. ಲಾಕ್‌ಡೌನ್ ನಂತರದಲ್ಲಿ ದೇಶದ ಅರ್ಥ ವ್ಯವಸ್ಥೆಯು ಹಿಂಜರಿತದ ಸ್ಥಿತಿಗೆ ಹೊರಳಿದೆ. ಆದರೆ, ಇದು ಷೇರು ಮಾರುಕಟ್ಟೆಯಲ್ಲಿ ಪ್ರತಿಫಲಿತವಾಗಲಿಲ್ಲ.
ಏಪ್ರಿಲ್ ನಂತರದಲ್ಲಿ ಕುಪ್ಪಳಿಸುತ್ತ ಸಾಗಿರುವ ಬಿಎಸ್‌ಇ ಸೆನ್ಸೆಕ್ಸ್, ಈಗ 48 ಸಾವಿರ ಅಂಶಗಳ ಗಡಿಯನ್ನು ಚುಂಬಿಸುವ ಹವಣಿಕೆಯಲ್ಲಿದೆ. ಅರ್ಥ ವ್ಯವಸ್ಥೆ ಬಡವಾಗಿದ್ದಾಗಲೂ ಷೇರು ಮಾರುಕಟ್ಟೆಗಳು ದಾಖಲೆಯ ವಹಿವಾಟು ನಡೆಸುತ್ತಿರುವುದನ್ನು ಕಂಡ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ‘ಅರ್ಥವ್ಯವಸ್ಥೆ ಹಾಗೂ ಷೇರು ಮಾರುಕಟ್ಟೆ ನಡುವೆ ಸಂಬಂಧವೇ ಇಲ್ಲದಂತಾಗಿದೆ’ ಎಂದು ಎಚ್ಚರಿಸಿದ್ದರು.
‘ದೇಶದ ಅರ್ಥವ್ಯವಸ್ಥೆಯು ಮುಂದೆ ಚೇತರಿಸಿಕೊಳ್ಳುತ್ತದೆ ಎಂಬ ಭರವಸೆಯಿಂದ ಹೂಡಿಕೆದಾರರು ಷೇರು ಮಾರುಕಟ್ಟೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಹಾಗಾಗಿ, ಈ ಪರಿಯ ವಹಿವಾಟು ನಡೆಯುತ್ತಿದೆ’ ಎಂಬ ವಿಶ್ಲೇಷಣೆ ಕೂಡ ವ್ಯಕ್ತವಾಗಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.