ADVERTISEMENT

5 ಕಿ.ಮೀ.ಗೆ ಒಂದೇ ಬ್ಯಾಂಕ್‌: ಶಾಖೆಗಳನ್ನು ಮುಚ್ಚಲು ಯೋಚಿಸುತ್ತಿವೆ ಬ್ಯಾಂಕ್‌ಗಳು?

ಏಜೆನ್ಸೀಸ್
Published 26 ಮಾರ್ಚ್ 2020, 8:01 IST
Last Updated 26 ಮಾರ್ಚ್ 2020, 8:01 IST
ಬ್ಯಾಂಕ್‌
ಬ್ಯಾಂಕ್‌    

ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಿಸದಂತೆ ತಡೆಯಲು ದೇಶದಾದ್ಯಂತ ಬಹುತೇಕ ಬ್ಯಾಂಕ್‌ ಶಾಖೆಗಳ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಾಗೂ ಪ್ರಮುಖ ಬ್ಯಾಂಕ್‌ಗಳು ಯೋಜನೆ ರೂಪಿಸುತ್ತಿವೆ. ಸಾವಿರಾರು ಬ್ಯಾಂಕ್‌ ಸಿಬ್ಬಂದಿಯ ಸುರಕ್ಷತೆಗಾಗಿ ಈ ಕ್ರಮಕ್ಕೆ ಮುಂದಾಗುತ್ತಿರುವುದಾಗಿ ತಿಳಿದು ಬಂದಿದೆ.

ವ್ಯಾಪಾರ ವಹಿವಾಟು ಹಾಗೂ ಪಾವತಿಗಾಗಿ ನಗದು ವ್ಯವಸ್ಥೆಯನ್ನೇ ಅತಿ ಹೆಚ್ಚು ನೆಚ್ಚಿ ಕೊಂಡಿರುವ ಜನರಿಗೆ ಇದರಿಂದ ಹೊರಯಾಗಬಹುದಾಗಿದೆ. ದೇಶದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿದ್ದರೂ ಬ್ಯಾಂಕ್‌ಗಳ ಕಾರ್ಯಾಚರಣೆ ಎಂದಿನಂತೆ ನಡೆದಿದೆ.

ಮೂಲಗಳ ಪ್ರಕಾರ, ಪ್ರಮುಖ ನಗರಗಳಲ್ಲಿ ಪ್ರತಿ ಐದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಕೇವಲ ಒಂದು ಬ್ಯಾಂಕ್‌ ಮಾತ್ರ ಕಾರ್ಯಾಚರಣೆ ನಡೆಸಲಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ADVERTISEMENT

ಶೇ 70ರಷ್ಟು ನಗದು ವಹಿವಾಟಿನ ಮೇಲೆ ಅವಲಂಬಿತರಾಗಿರುವ ದೇಶದ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್‌ಗಳು ಒಂದು ದಿನ ಬಿಟ್ಟು ಒಂದು ದಿನದಂತೆ ಕಾರ್ಯಾಚರಣೆ ನಡೆಸಲಿವೆ. ಬಡ ಜನರಿಗೆ ಹಲವು ಯೋಜನೆಗಳ ಅಡಿ ದೊರೆಯುವ ಹಣ ವಿತರಣೆಗಳಿಗಾಗಿ ಮಾತ್ರವೇ ಸಿಬ್ಬಂದಿ ನಿಯೋಜನೆಯಾಗಲಿದೆ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಡಿಜಿಟಲ್‌ ವಹಿವಾಟಿನ ಕುರಿತು ಮಾಹಿತಿ ಇರದ ಗ್ರಾಮೀಣ ಭಾಗದ ಜನರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಾತ್ರವೇ ಬ್ಯಾಂಕ್‌ ಶಾಖೆಗಳು ಕಾರ್ಯಾಚರಣೆ ನಡೆಸಲಿವೆ. ಕೋವಿಡ್‌–19 ಪರಿಣಾಮ ಸರ್ಕಾರ ಬಡವರಿಗಾಗಿ ಪರಿಹಾರ ರೂಪದಲ್ಲಿ ಯಾವುದೇ ಪ್ಯಾಕೇಜ್‌ ಘೋಷಣೆಯಾದರೂ, ಅದು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಸೇರಲಿದೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ನೂಕು ನುಗ್ಗಲು ನಿರ್ಮಾಣವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.