ADVERTISEMENT

ಚೀನಿ ಕಂಪನಿಗಳ ವಿರುದ್ಧ ತನಿಖೆ

ಸಾಲದ ಮೊಬೈಲ್ ಆ್ಯಪ್‌ಗಳ ಜೊತೆಗೆ ಸಂಪರ್ಕ

ಪಿಟಿಐ
Published 27 ಫೆಬ್ರುವರಿ 2024, 15:44 IST
Last Updated 27 ಫೆಬ್ರುವರಿ 2024, 15:44 IST
ಚೀನಾ
ಚೀನಾ   

ನವದೆಹಲಿ (ಪಿಟಿಐ): ನಾಗರಿಕರಿಗೆ ಸಾಲದ ಆಮಿಷವೊಡ್ಡಿ ಡಿಜಿಟಲ್ ವಂಚನೆಯಲ್ಲಿ ತೊಡಗಿರುವ ಮೊಬೈಲ್‌ ಆ್ಯಪ್‌ಗಳ ಜೊತೆಗೆ ಸಂಪರ್ಕ ಬೆಸೆದುಕೊಂಡಿರುವ ಚೀನಿ ಕಂಪನಿಗಳ ವಿರುದ್ಧ ನಡೆಯುತ್ತಿರುವ ತನಿಖೆಯು ಮುಕ್ತಾಯದ ಹಂತದಲ್ಲಿದೆ ಎಂದು ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಅಕ್ರಮವಾಗಿ ಸಾಲದ ಆ್ಯಪ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಇವುಗಳೊಟ್ಟಿಗೆ ಈ ಕಂಪನಿಗಳು ಸಂಪರ್ಕ ಹೊಂದಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ಸಚಿವಾಲಯ ಸೇರಿದಂತೆ ಹಲವು ಸಂಸ್ಥೆಗಳಿಂದ ಸಲ್ಲಿಕೆಯಾದ ದೂರಿನ ಮೇರೆಗೆ ಸಚಿವಾಲಯವು ತನಿಖೆಗೆ ಆದೇಶಿಸಿತ್ತು.

‘ಕಂಪನಿಗಳು ವಂಚನೆಯಲ್ಲಿ ತೊಡಗಿವೆಯೇ ಎಂಬ ಬಗ್ಗೆ ಗಂಭೀರ ವಂಚನೆ ತನಿಖಾ ಕಚೇರಿಯಿಂದ ಎಲ್ಲಾ ಆಯಾಮಗಳಲ್ಲೂ ನಡೆಯುತ್ತಿರುವ ತನಿಖೆಯು ಅಂತಿಮ ಘಟ್ಟ ತಲುಪಿದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ADVERTISEMENT

‘ಈ ಕಂಪನಿಗಳ ಆರ್ಥಿಕ ಮೂಲವನ್ನು ಪತ್ತೆ ಹಚ್ಚುವುದು ಕಷ್ಟಕರ. ಆದರೆ, ಇವುಗಳ ನೈಜ ಮಾಲೀಕತ್ವದ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. 

2022ರ ಸೆಪ್ಟೆಂಬರ್‌ನಿಂದ 2023ರ ಆಗಸ್ಟ್‌ವರೆಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ 2,200ಕ್ಕೂ ಹೆಚ್ಚು ಸಾಲದ ಆ್ಯಪ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ನ ಅಧಿವೇಶನದ ವೇಳೆ ರಾಜ್ಯಸಭೆಗೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.