ನವದೆಹಲಿ: ‘ಕೊರೊನಾ–2‘ ವೈರಸ್ ಹಾವಳಿಯಿಂದಾಗಿ ಆರ್ಥಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿರುವುದರಿಂದ ದೇಶಿ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆಯಾಗಿರುವ ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜಿಸಿದೆ.
ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯು ಸ್ಥಿರತೆಯಿಂದ ನಕಾರಾತ್ಮಕವಾಗಿರಲಿದೆ ಎಂದು ತನ್ನ ಮುನ್ನೋಟ ವರದಿಯಲ್ಲಿ ತಿಳಿಸಿದೆ.
ರಿಟೇಲ್, ಕಾರ್ಪೊರೇಟ್, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಸಂಬಂಧಿಸಿದಂತೆ ಬ್ಯಾಂಕ್‌ಗಳು ನೀಡುವ ಸಾಲಗಳ ಮರುಪಾವತಿ ವಿಳಂಬವಾಗಲಿದೆ. ಇದರಿಂದ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚಳಗೊಂಡು ಲಾಭ ಕಡಿಮೆಯಾಗಲಿದೆ. ಹೀಗಾಗಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಮುನ್ನೋಟವನ್ನು ಸ್ಥಿರತೆಯಿಂದ ನಕಾರಾತ್ಮಕ ಮಟ್ಟಕ್ಕೆ ಬದಲಿಸಿರುವುದಾಗಿ ಮೂಡಿಸ್ ಹೇಳಿದೆ.
ಕೊರೊನಾ ದಿಗ್ಬಂಧನದಿಂದಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಕಂಡು ಬರಲಿರುವ ಅಡಚಣೆಯು ದೇಶಿ ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯನ್ನು ಉಲ್ಬಣಗೊಳಿಸಲಿದೆ. ಸರಕು ಮತ್ತು ಸೇವೆಗಳ ದೇಶಿ ಬೇಡಿಕೆ ಮತ್ತು ಖಾಸಗಿ ಬಂಡವಾಳ ಹೂಡಿಕೆ ಮಟ್ಟ ಕಡಿಮೆಯಾಗಲಿದೆ.
ಆರ್ಥಿಕ ಚಟುವಟಿಕೆಗಳಲ್ಲಿನ ತೀವ್ರ ಕುಸಿತ ಮತ್ತು ನಿರುದ್ಯೋಗ ಹೆಚ್ಚಳದ ಕಾರಣಕ್ಕೆ ಕುಟುಂಬಗಳ ಮತ್ತು ಕಾರ್ಪೊರೇಟ್‌ಗಳ ಹಣಕಾಸು ಪರಿಸ್ಥಿತಿ ವಿಷಮಗೊಳ್ಳಲಿದೆ ಎಂದು ಎಚ್ಚರಿಸಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ವಾಣಿಜ್ಯ ಬ್ಯಾಂಕ್‌ಗಳು ಗರಿಷ್ಠ ಪ್ರಮಾಣದಲ್ಲಿ ಸಾಲ ವಿತರಿಸಿವೆ. ‘ಎನ್‌ಬಿಎಫ್‌ಸಿ‘ಗಳು ಎದುರಿಸುತ್ತಿರುವ ನಗದು ಬಿಕ್ಕಟ್ಟಿನ ಫಲವಾಗಿ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯು ಇನ್ನಷ್ಟು ಹದಗೆಡಲಿದೆ. ಅವುಗಳ ಸಾಲ ನೀಡಿಕೆ ಪ್ರಮಾಣ ಲಾಭ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರವು ಬ್ಯಾಂಕ್‌ಗಳ ಬೆಂಬಲಕ್ಕೆ ನಿಂತರೆ ಮಾತ್ರ ಅವುಗಳ ಮೇಲಿನ ಹಣಕಾಸು ಹೊರೆ ತಗ್ಗಲಿದೆ.
ಹಣಕಾಸು ವ್ಯವಸ್ಥೆಯಲ್ಲಿನ ಶೇ 75ರಷ್ಟು ಠೇವಣಿಗಳನ್ನು ನಿರ್ವಹಿಸುವ 16 ವಾಣಿಜ್ಯ ಬ್ಯಾಂಕ್‌ಗಳ ಕಾರ್ಯವೈಖರಿಯನ್ನು ಮೂಡೀಸ್ ಮೌಲ್ಯಮಾಪನ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.