ನವದೆಹಲಿ: ‘ಕೋವಿಡ್ -19’ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದಲ್ಲಿ ಉದ್ಭವಿಸಬಹುದಾದ ಅಡುಗೆ ಅನಿಲದ (ಎಲ್‌ಪಿಜಿ) ಹೆಚ್ಚುವರಿ ಬೇಡಿಕೆ ಪೂರೈಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಗತ್ಯ ಕ್ರಮ ಕೈಗೊಂಡಿದೆ.
ತನ್ನ ಬಾಟ್ಲಿಂಗ್ ಸ್ಥಾವರಗಳಿಗೆ ಅಡುಗೆ ಅನಿಲದ ನಿರಂತರ ಲಭ್ಯತೆ ಖಚಿತಪಡಿಸಿಕೊಳ್ಳಲು ಏಪ್ರಿಲ್ ಮತ್ತು ಮೇ ತಿಂಗಳಿಗೆ ಸಾಮಾನ್ಯ ಆಮದು ಪ್ರಮಾಣಕ್ಕಿಂತ ಶೇ 50 ರಷ್ಟು ಹೆಚ್ಚು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಬೇಡಿಕೆ ಪೂರೈಸಲು ಎಲ್‌ಪಿಜಿ ಬಾಟ್ಲಿಂಗ್ ಘಟಕಗಳು ಹೆಚ್ಚುವರಿ ಅವಧಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿವೆ. ಸಿಲಿಂಡರ್‌ಗಳ ತ್ವರಿತ ಪೂರೈಕೆಗಾಗಿ ಸಾಗಾಣಿಕೆ ಮೂಲಸೌಕರ್ಯವನ್ನು ಸಹ ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ.
3.38 ಕೋಟಿ: 15 ದಿನಗಳಲ್ಲಿ ಪೂರೈಸಿದ ಎಲ್‌ಪಿಜಿ ಸಿಲಿಂಡರ್‌ಗಳ ಸಂಖ್ಯೆ
26 ಲಕ್ಷ: ಪ್ರತಿ ದಿನ ಪೂರೈಸಿದ ಪ್ರಮಾಣ
ಎಲ್‌ಪಿಜಿ ವಿತರಣೆಗೆ ಪಾಸ್ ಅಡ್ಡಿ
ಬೆಂಗಳೂರು: ಅಡುಗೆ ಅನಿಲ (ಎಲ್‌ಪಿಜಿ ) ಸಿಲಿಂಡರ್ ವಿತರಣೆಗೆ ಗ್ಯಾಸ್ ಏಜೆನ್ಸಿಗಳಿಗೆ ಮತ್ತು ಸಿಲಿಂಡರ್ ವಿತರಕರಿಗೆ ಪೊಲೀಸ್ ಪಾಸ್ ಅಗತ್ಯವಾಗಿ ಇರಬೇಕೆ ಅಥವಾ ಬೇಡವೇ ಎನ್ನುವ ಗೊಂದಲದಿಂದಾಗಿ ರಾಜ್ಯದ ಅನೇಕ ಕಡೆಗಳಲ್ಲಿ ಪೂರೈಕೆಗೆ ಅಡಚಣೆ ಉಂಟಾಗಿದೆ.
ಪಾಸ್ ಇಲ್ಲದ ಕಾರಣಕ್ಕೆ ಸಿಲಿಂಡರ್ ವಿತರಿಸುವವರನ್ನು ಪೊಲೀಸರು ತಡೆದ ಘಟನೆಗಳು ನಡೆದಿವೆ. ಹೀಗಾಗಿ ಕೆಲಸಕ್ಕೆ ಬರಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಸಿಲಿಂಡರ್ ವಿತರಕರು ತಿಳಿಸಿದ್ದಾರೆ.
‘ಬೆಂಗಳೂರಿನಲ್ಲಿ 250 ವಿತರಕರು ಇದ್ದಾರೆ. ಅವರಲ್ಲಿ ಕೇವಲ 20 ವಿತರಕರು ಮಾತ್ರ ಪಾಸ್ ಹೊಂದಿದ್ದಾರೆ. ಸಿಲಿಂಡರ್ ವಿತರಿಸುವವರ ಬಳಿ ಇರುವ ಗುರುತಿನ ಚೀಟಿ ಆಧರಿಸಿ ಅನುಮತಿ ನೀಡಬೇಕು ಎಂದು ನಾವು ಪೊಲೀಸ್‌ರಿಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಅಖಿಲ ಭಾರತ ವಿತರಕರ ಒಕ್ಕೂಟದ ಕಾರ್ಯದರ್ಶಿ ರಮೇಶ್ ಕುಮಾರ್ ಅವರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಸಂಪೂರ್ಣ ದಿಗ್ಬಂಧನ ಜಾರಿಯಲ್ಲಿ ಇರುವ ಕಾರಣಕ್ಕೆ ಕಲಬುರ್ಗಿ ಮತ್ತು ದಾವಣಗೆರೆ ನಗರಗಳಲ್ಲಿ ಸಿಲಿಂಡರ್ ವಿತರಣೆಗೆ ತೀವ್ರ ಅಡಚಣೆ ಉಂಟಾಗಿದೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.