ADVERTISEMENT

ಲಾಕ್‌ಡೌನ್‌ನಲ್ಲಿ ಪಾರ್ಲೆ–ಜಿ ಬಿಸ್ಕತ್‌ ಮಾರಾಟ ಹೆಚ್ಚಳ: 40 ವರ್ಷಗಳಲ್ಲೇ ಅಧಿಕ

ಪಿಟಿಐ
Published 10 ಜೂನ್ 2020, 2:51 IST
Last Updated 10 ಜೂನ್ 2020, 2:51 IST
ಪಾರ್ಲೆ–ಜಿ ಬಿಸ್ಕತ್‌ : ಚಿತ್ರ ಕೃಪೆ–ಪಾರ್ಲೆ ವೆಬ್‌ಸೈಟ್‌
ಪಾರ್ಲೆ–ಜಿ ಬಿಸ್ಕತ್‌ : ಚಿತ್ರ ಕೃಪೆ–ಪಾರ್ಲೆ ವೆಬ್‌ಸೈಟ್‌   

ನವದೆಹಲಿ: ಕೊರೊನಾ ವೈರಸ್‌ ಲಾಕ್‌ಡೌನ್‌ ಅವಧಿಯಲ್ಲಿ ಪಾರ್ಲೆ–ಜಿ ಬಿಸ್ಕತ್‌ಗಳ ದಾಖಲೆಯ ಮಾರಾಟ ನಡೆದಿದೆ. ಏಪ್ರಿಲ್‌ ಹಾಗೂ ಮೇನಲ್ಲಿ ಹೆಚ್ಚು ಜನರು ಪಾರ್ಲೆ–ಜಿ ಬಿಸ್ಕತ್‌ ಖರೀದಿಸಿರುವುದಾಗಿ ಪಾರ್ಲೆ ಪ್ರಾಡಕ್ಟ್ಸ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತೀವ್ರ ಪೈಪೋಟಿ ಇರುವ ಬಿಸ್ಕಟ್‌ ಮಾರಾಟ ವಲಯದಲ್ಲಿ ಶೇ 5ರಷ್ಟು ಮಾರುಕಟ್ಟೆ ಪಾಲು ಗಳಿಸಿಕೊಂಡಿದೆ. ಲಾಕ್‌ಡೌನ್‌ ಸಮಯದಲ್ಲಿ ಜನರು ಅತಿ ಹೆಚ್ಚು ಪಾರ್ಲೆ–ಜಿ ಬಿಸ್ಕತ್‌ ಖರೀದಿಸಿರುವುದರಿಂದ ಇದು ಸಾಧ್ಯವಾಗಿದೆ.

ಕೋವಿಡ್‌–19ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸರ್ಕಾರಿ ಸಂಸ್ಥೆಗಳು ಹಾಗೂ ಸ್ವಯಂ ಸೇವಕ ಸಂಘಗಳು ಆಹಾರ ಪೊಟ್ಟಣಗಳ ವಿತರಣೆಯಲ್ಲಿ ಪಾರ್ಲೆ–ಜಿ ಬಿಸ್ಕಟ್‌ ಸಹ ನೀಡಿದ್ದಾರೆ. ಹೆಚ್ಚು ಗ್ಲೂಕೋಸ್‌ ಅಂಶಗಳನ್ನು ಹೊಂದಿರುವ ಬಿಸ್ಕತ್‌ ಹಾಗೂ ₹2ರ ಪೊಟ್ಟಣವೂ ಸಿಗುವುದರಿಂದ ಪಾರ್ಲೆ–ಜಿ ಬಳಕೆ ಹೆಚ್ಚಿದೆ.

ADVERTISEMENT

'ಲಾಕ್‌ಡೌನ್‌ ಅವಧಿಯಲ್ಲಿ ಪಾರ್ಲೆ ಮಾರುಕಟ್ಟೆ ಪಾಲು ಶೇ 4.5ರಿಂದ 5ರಷ್ಟು ಹೆಚ್ಚಿಸಿಕೊಂಡಿತು. ಕಳೆದ 30ರಿಂದ 40 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಂಪನಿ ಕಂಡಿರಲಿಲ್ಲ. ಬಹಳಷ್ಟು ಭಾರತೀಯರಿಗೆ ಇದು ಬರಿಯ ಬಿಸ್ಕತ್‌ ಅಲ್ಲ, ಆಹಾರವೇ ಆಗಿದೆ. ಲಾಕ್‌ಡೌನ್ ಸಂಕಷ್ಟದಲ್ಲಿ ಜನರು ಹೆಚ್ಚು ಪಾರ್ಲೆ ಬಿಸ್ಕತ್‌ ಸೇವಿಸಿದ್ದಾರೆ. ಪಾರ್ಲೆ ಮೇಲೆ ಜನರ ನಂಬಿಕೆ ದೊಡ್ಡದಿದೆ. ಹೆಚ್ಚು ಸಮಯದ ವರೆಗೂ ಪಾರ್ಲೆ–ಜಿ ಬಿಸ್ಕಟ್‌ನ್ನು ಸಂಗ್ರಹಿಸಿ ಇಡಬಹುದು ' ಎಂದು ಪಾರ್ಲೆಯ ಹಿರಿಯ ಅಧಿಕಾರಿ ಮಯಾಂಕ್‌ ಶಾ ಹೇಳಿದ್ದಾರೆ.

ಸುನಾಮಿ ಹಾಗೂ ಭೂಕಂಪದ ಸಮಯದಲ್ಲಿಯೂ ಪಾರ್ಲೆ–ಜಿ ಬಿಸ್ಕತ್‌ಗಳ ಮಾರಾಟ ಹೆಚ್ಚು ದಾಖಲಾಗಿದೆ. ಕೋವಿಡ್‌–19 ಸಮಯದಲ್ಲಿ ದೇಶದಲ್ಲಿ 3 ಕೋಟಿ ಪಾರ್ಲೆ–ಜಿ ಪಾಕೆಟ್‌ಗಳನ್ನು ಉಚಿತವಾಗಿ ವಿತರಿಸಲು ನೀಡಿದೆ.

ಬಹಳಷ್ಟು ಸಂಘ–ಸಂಸ್ಥೆಗಳು ಜನರಿಗೆ ಪಾರ್ಲೆ–ಜಿ ಬಿಸ್ಕತ್‌ ಹಂಚಿವೆ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಜನರು ಹೆಚ್ಚು ಬಿಸ್ಕತ್‌ ಸೇವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.