ಬೆಂಗಳೂರು: ಭಾರತದ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್) ಬೆಂಗಳೂರು ವಿಭಾಗವು ಪ್ರಸಕ್ತ ಸಾಲಿನ ಮೊದಲ ರಿಯಲ್ ಎಸ್ಟೇಟ್ ಮೇಳವನ್ನು ನಗರದಲ್ಲಿ ಮಾರ್ಚ್ 2 ಮತ್ತು 3ರಂದು ಏರ್ಪಡಿಸಿದೆ.
ಕುಮಾರಕೃಪಾ ರಸ್ತೆಯಲ್ಲಿ ಇರುವ ಅಶೋಕ ಹೋಟೆಲ್‌ನಲ್ಲಿ ಈ ಮೊದಲ ಮೇಳ ಆಯೋಜಿಸಲಾಗಿದೆ. ಮಾರ್ಚ್ 9 ಮತ್ತು 10 ರಂದು ಮಾರತ್‌ಹಳ್ಳಿಯ ರ‍್ಯಾಡಿಸನ್ ಬ್ಲೂದಲ್ಲಿ (ಪಾರ್ಕ್‌ಪ್ಲಾಜಾ) ಏರ್ಪಡಿಸಲಾಗಿದೆ. ಗೃಹ ನಿರ್ಮಾಣ ವಲಯದ 30 ಸಂಸ್ಥೆಗಳು ಮತ್ತು 7 ಹಣಕಾಸು ಸಂಸ್ಥೆಗಳು ಈ ಎರಡೂ ಮೇಳಗಳಲ್ಲಿ ಭಾಗವಹಿಸಲಿವೆ.
ಈ ಮೇಳವು ಮನೆಗಳನ್ನು ಖರೀದಿಸಲು ಆಸಕ್ತಿ ಉಳ್ಳವರು, ಹುಡುಕಾಟ ನಡೆಸುವವರಿಗೆ ಮಾತ್ರ ಅನುಕೂಲತೆ ಒದಗಿಸಿಕೊಡುತ್ತಿಲ್ಲ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವವರಿಗೂ ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಕನಸಿನ ಮನೆ ಖರೀದಿಸಲು ಇಚ್ಛಿಸುವವರಿಗೆ, ರಿಯಲ್ ಎಸ್ಟೇಟ್ ಮಾಹಿತಿ ಬಯಸುವವರಿಗೆ ಹಾಗೂ ಹಣಕಾಸು ಸಲಹೆ ಪಡೆಯಲು ಇಚ್ಛಿಸುವವರಿಗೆ ಒಂದು ವಿಶಿಷ್ಟ ಅನುಭವ ಒದಗಿಸಲಿದೆ. ಒಂದೇ ಸೂರಿನಡಿ ಎಲ್ಲಾ ಸವಲತ್ತುಗಳು ಇಲ್ಲಿ ದೊರೆಯಲಿವೆ.
‘ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿಯು ದರ ಕಡಿತ ಮಾಡಿರುವುದರಿಂದ ಮನೆ ಖರೀದಿ ಬೇಡಿಕೆ ಹೆಚ್ಚಳಗೊಳ್ಳಲಿದೆ. ಬೆಂಗಳೂರಿನಲ್ಲಿ ವಸತಿ ಆಸ್ತಿ ಮಾರಾಟವು ಹಿಂದಿನ ಆರು ತಿಂಗಳಲ್ಲಿ ಉತ್ತಮ ಪ್ರಗತಿ ಕಂಡಿದೆ ’ ಎಂದು ಕ್ರೆಡಾಯ್ ಬೆಂಗಳೂರು ಅಧ್ಯಕ್ಷ ಆಶಿಶ್ ಪುರವಂಕರ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.