ಬೆಂಗಳೂರು: ಗೃಹಸಾಲದ ಮೇಲಿನ ಬಡ್ಡಿ ದರವು ಒಂದು ವರ್ಷದಿಂದ ಏರುಗತಿಯಲ್ಲಿ ಸಾಗಿದ್ದರೂ, ಮನೆ ಹಾಗೂ ಫ್ಲ್ಯಾಟ್‌ಗಳಿಗೆ ಬೇಡಿಕೆ ತಗ್ಗಿಲ್ಲ. ಬೆಂಗಳೂರಿನಲ್ಲಿ ಈ ವರ್ಷದ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮನೆ ಹಾಗೂ ಫ್ಲ್ಯಾಟ್‌ಗಳ ಬೆಲೆಯು ಸರಾಸರಿ ಶೇಕಡ 14ರಷ್ಟು ಹೆಚ್ಚಳ ಕಂಡಿದೆ.
‘ಸಾಲದ ಮೇಲಿನ ಬಡ್ಡಿ ದರವು ಗರಿಷ್ಠ ಮಟ್ಟವನ್ನು ತಲುಪಿ ಆಗಿದೆ ಎಂದು ಭಾವಿಸಲಾಗಿದೆ. ಈಗ ರೆಪೊ ದರ ಏರಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿರಾಮ ನೀಡಿದೆ. ಇದರ ಜೊತೆಯಲ್ಲಿ, ದೇಶದ ಆರ್ಥಿಕ ಬೆಳವಣಿಗೆಯು ಆರೋಗ್ಯಕರ ಮಟ್ಟದಲ್ಲಿ ಇರುವ ನಿರೀಕ್ಷೆ ಇದ್ದು, ಮನೆ ಹಾಗೂ ಫ್ಲ್ಯಾಟ್‌ಗಳ ಮಾರುಕಟ್ಟೆಯಲ್ಲಿ ಇನ್ನಷ್ಟು ಚೇತರಿಕೆ ಇರಲಿದೆ’ ಎಂದು ಕ್ರೆಡಾಯ್, ಕೊಲಿಯರ್ಸ್ ಮತ್ತು ಲಿಯಾಸಸ್ ಫೊರಾಸ್ ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯೊಂದು ಹೇಳಿದೆ.
ದೇಶದ ಎಂಟು ಪ್ರಮುಖ ನಗರಗಳಲ್ಲಿ ಮನೆ, ಫ್ಲ್ಯಾಟ್‌ಗಳ ಬೇಡಿಕೆ ಬಗ್ಗೆ ಅಧ್ಯಯನ ವರದಿಯು ಗಮನ ಹರಿಸಿದೆ. ಎಂಟೂ ನಗರಗಳನ್ನು ಪರಿಗಣಿಸಿದರೆ ಸರಾಸರಿ ಬೆಲೆ ಏರಿಕೆಯು ಶೇಕಡ 8ರಷ್ಟು ಇದೆ. ‘ಮನೆ, ಫ್ಲ್ಯಾಟ್‌ಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ, ಸ್ಥಿರವಾದ ಬೇಡಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ. ಕೋವಿಡ್ ನಂತರದಲ್ಲಿ ಗ್ರಾಹಕರು ದೊಡ್ಡ ಮನೆಗಳನ್ನು ಹೊಂದುವುದಕ್ಕೆ ಬಯಸುತ್ತಿದ್ದಾರೆ. ಹೀಗಾಗಿ ಬೇಡಿಕೆಯು ಮುಂದಿನ ದಿನಗಳಲ್ಲಿಯೂ ಹೆಚ್ಚಿರುವ ನಿರೀಕ್ಷೆ ಇದೆ’ ಎಂದು ಕ್ರೆಡಾಯ್ ಅಧ್ಯಕ್ಷ ಬೊಮನ್ ಇರಾನಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮನೆ, ಫ್ಲ್ಯಾಟ್‌ಗಳ ಬೆಲೆಯು ಚದರ ಅಡಿಗೆ ಸರಾಸರಿ ₹8,748ರಷ್ಟು ಇದೆ. ಬೆಂಗಳೂರನ್ನು ಇಡಿಯಾಗಿ ಪರಿಗಣಿಸಿದಾಗ, ಬೆಲೆಯಲ್ಲಿ ಶೇ 14ರಷ್ಟು ಏರಿಕೆ ಆಗಿದ್ದರೂ, ‘ಉತ್ತರ ಒಳಭಾಗ’ದಲ್ಲಿ ಬೇಡಿಕೆಯು ಸೀಮಿತವಾಗಿದ್ದ ಕಾರಣ ಬೆಲೆಯಲ್ಲಿ ಶೇ 13ರಷ್ಟು ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೆಬ್ಬಾಳ–ಸಂಜಯನಗರ, ಮಲ್ಲೇಶ್ವರ, ನಾಗವಾರ, ರಿಚರ್ಡ್ಸ್ ಟೌನ್, ಆರ್.ಟಿ. ನಗರ ಮುಖ್ಯ ರಸ್ತೆ ಪ್ರದೇಶವನ್ನು ವರದಿಯು ‘ಉತ್ತರ ಒಳಭಾಗ’ ಎಂದು ಪರಿಗಣಿಸಿದೆ. ಬೆಂಗಳೂರಿನಲ್ಲಿ 3–ಬಿಎಚ್‌ಕೆ (ಮೂರು ಬೆಡ್‌ರೂಂಗಳು ಹಾಗೂ ಒಂದು ಹಾಲ್ ಇರುವಂಥವು) ಮನೆಗಳಿಗೆ ಬೇಡಿಕೆಯು ಅತಿಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ವಿಭಾಗದ ಮನೆಗಳ ಬೇಡಿಕೆ ಶೇ 16ರಷ್ಟು ಹೆಚ್ಚಾಗಿದೆ. 4–ಬಿಎಚ್‌ಕೆ ಮನೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಜನಪ್ರಿಯ 2–ಬಿಎಚ್‌ಕೆ ವರ್ಗದ ಮನೆಗಳ ಬೇಡಿಕೆಯಲ್ಲಿ ಏರಿಕೆ ಇದ್ದರೂ, 3–ಬಿಎಚ್‌ಕೆ ಮನೆಗಳಿಗೆ ಇರುವಷ್ಟಿಲ್ಲ.
‘2005ರಿಂದ 2012ರವರೆಗೆ ಮನೆ, ಫ್ಲ್ಯಾಟ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ದಾಖಲಾಯಿತು. ಆ ಅವಧಿಯಲ್ಲಿ ಹೂಡಿಕೆಯೂ ಹೆಚ್ಚು ಆಯಿತು. ಆದರೆ, 2014ರಿಂದ 2022ರವರೆಗೆ ಬೆಲೆ ಹೆಚ್ಚಳ ಇರಲಿಲ್ಲ. ಈಗ ಬೆಲೆಯಲ್ಲಿ ಆಗುತ್ತಿರುವ ಏರಿಕೆಯು ಇನ್ನೂ ಕೆಲವು ತ್ರೈಮಾಸಿಕಗಳವರೆಗೆ ಮುಂದುವರಿಯಬಹುದು, ಬೆಲೆಯು ಶೇ 6ರವರೆಗೆ ಹೆಚ್ಚಾಗಬಹುದು’ ಎಂದು ಪ್ರಾವಿಡೆಂಟ್ ಹೌಸಿಂಗ್ ಸಿಇಒ ಮಲ್ಲಣ್ಣ ಸಾಸಲು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಿಲೆನಿಯಲ್‌ಗಳು ಸ್ವಂತಕ್ಕೆ ಮನೆ ಖರೀದಿ ಮಾಡುವುದಿಲ್ಲ ಎಂಬ ಮಾತು ಸುಳ್ಳಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದೆ. ಮುಂದೆ ಆರ್‌ಬಿಐ ರೆಪೊ ದರವನ್ನು ಇನ್ನಷ್ಟು ತಗ್ಗಿಸಿದರೆ, ಮನೆ ಮಾರುಕಟ್ಟೆಯು ಇನ್ನಷ್ಟು ಬೆಳವಣಿಗೆ ಕಾಣುತ್ತದೆ’ ಎಂದು ಅವರು ಹೇಳಿದರು. ಜನವರಿ–ಮಾರ್ಚ್ ಅವಧಿಯಲ್ಲಿ ಮುಂಬೈನಲ್ಲಿ ಮಾತ್ರ ಮನೆಗಳ ಬೆಲೆಯಲ್ಲಿ ಇಳಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.