ನವದೆಹಲಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವರಿಯಲ್ ಎಸ್ಟೇಟ್ ಉದ್ದಿಮೆಗೆ ತಕ್ಷಣವೇ ಪರಿಹಾರ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟವು (ಕ್ರೆಡಾಯ್) ಪತ್ರ ಬರೆದಿದೆ.
‘ಕ್ರೆಡಾಯ್’ 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಈ ವಲಯವು 250 ಉದ್ದಿಮೆಗಳೊಂದಿಗೆ ನೇರ ಮತ್ತು ಪರೋಕ್ಷವಾಗಿ ಸಂಪರ್ಕ ಹೊಂದಿದೆ. ಹೀಗಾಗಿ ರಿಯಲ್ ಎಸ್ಟೇಟ್ ರಕ್ಷಣೆಗೆ ಕ್ರಮ ಕೈಗೊಂಡರೆ ಅದರೊಂದಿಗೆ ಸಂಪರ್ಕ ಹೊಂದಿರುವ ಇತರ ಉದ್ದಿಮೆಗಳಿಗೂ ಅನುಕೂಲವಾಗಲಿದ್ದು, ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದೆ.
ನಗದು ಕೊರತೆ, ಬೇಡಿಕೆ ಕುಸಿತ ಮತ್ತು ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ದುಬಾರಿ ಬೆಲೆಯು ಉದ್ದಿಮೆ ಪುನರಾರಂಭಿಸಲು ಎದುರಾಗಿರುವ ಪ್ರಮುಖ ಅಡಚಣೆಗಳಾಗಿವೆ. ಹೀಗಾಗಿ ತಕ್ಷಣವೇ ಮಧ್ಯಪ್ರವೇಶಿಸಿ ಆರ್ಥಿಕ ಪರಿಹಾರ ನೀಡುವಂತೆ ಒತ್ತಾಯಿಸಿದೆ.
2008ರಲ್ಲಿ ಉದ್ಭವಿಸಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತಲೂ ಕೆಟ್ಟದಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. 2008ರಲ್ಲಿ ಆರ್‌ಬಿಐ ಜಾರಿಗೊಳಿಸಿದ್ದ ಸಾಲದ ಪುನರ್ ಹೊಂದಾಣಿಕೆ ಯೋಜನೆಯನ್ನು ತಕ್ಷಣವೇ ಎಲ್ಲಾ ಹಣಕಾಸು ಸಂಸ್ಥೆಗಳು ಜಾರಿಗೊಳಿಸಲು ಸೂಚನೆ ನೀಡುವಂತೆ ಕೇಳಿದೆ.
ಸಿಮೆಂಟ್, ಉಕ್ಕು ದರ ಏರಿಕೆ ನಿಯಂತ್ರಿಸಿ:ಸಿಮೆಂಟ್ ಮತ್ತು ಉಕ್ಕಿನ ದರದಲ್ಲಿ ದಿಢೀರ್ ಏರಿಕೆ ಮಾಡಲಾಗಿದ್ದು, ಈ ಮೂಲಕ ತಯಾರಕರು ಅಕ್ರಮ ವ್ಯಾಪಾರಕ್ಕೆ ಮುಂದಾಗಿದ್ದಾರೆ.ದರ ಏರಿಕೆ ನಿಯಂತ್ರಿಸಲು ಮಧ್ಯಪ್ರವೇಶಿಸುವಂತೆಯೂ ಪತ್ರದಲ್ಲಿ ಮನವಿ ಮಾಡಿದೆ.
ಲಾಕ್‌ಡೌನ್‌ನಿಂದಾಗಿ ರಿಯಲ್ ಎಸ್ಟೇಟ್ ವಲಯವು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಹೀಗಿರುವಾಗಿ ಈ ರೀತಿ ಏಕಾಏಕಿ ಕಚ್ಚಾ ಸಾಮಗ್ರಿಗಳ ದರದಲ್ಲಿ ಏರಿಕೆ ಮಾಡಿದರೆ ಅದರಿಂದ ನಿರ್ಮಾಣ ವೆಚ್ಚಹೆಚ್ಚಾಗಲಿದ್ದು, ಅಂತಿಮವಾಗಿ ಗಾಹಕರಿಗೂ ಹೊರೆಯಾಗಲಿದೆ ಎಂದಿದೆ.
ಬೇಡಿಕೆಗಳೇನು?
* ಒಂದು ಬಾರಿಗೆ ಸಾಲ ಪುನರ್ ಹೊಂದಾಣಿಕೆ
* ಹೊಸ ಗೃಹ ಸಾಲದ ಗರಿಷ್ಠ ಬಡ್ಡಿದರ ಶೇ 5ಕ್ಕೆ ತಗ್ಗಿಸಿಬೇಕು
* ನಗದು ಲಭ್ಯತೆ ಮತ್ತು ಬೇಡಿಕೆ ಹೆಚ್ಚಳಕ್ಕೆ ತೆರಿಗೆ ಪ್ರಯೋಜನಗಳು ಇರಬೇಕು
* ಹಾಲಿ ಇರುವ ಯೋಜನೆಗಳ ಮುಂಗಡದ ಶೇ 20ರಷ್ಟಕ್ಕೆ ಸಮನಾದ ಹೆಚ್ಚುವರಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಇದಕ್ಕೆ ಯಾವುದೇ ಹೆಚ್ಚುವರಿ ಸುರಕ್ಷತೆ ಕೇಳಬಾರದು. ಯೋಜನೆಗಳನ್ನು ‘ಎನ್‌ಪಿಎ’ ವ್ಯಾಪ್ತಿಗೆ ತರಬಾರದು
* ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ವಿಧಿಸುವ ದಂಡದ ಮೇಲಿನ ಬಡ್ಡಿದರವನ್ನು ಒಂದು ವರ್ಷದವರೆಗೆ ಅಥವಾ ಕೊರೊನಾ ಸಂಪೂರ್ಣವಾಗಿ ನಾಶವಾಗುವವರೆಗೆ ತಡೆಹಿಡಿಯಬೇಕು
* ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗೃಹ ಆಸ್ತಿ ಹೊಂದಿದ್ದರೆ ಅದಕ್ಕೆ ಬಂಡವಾಳ ಗಳಿಕೆ ತೆರಿಗೆ ವಿಧಿಸಬಾರದು
* ಕೈಗೆಟುಕುವ ಮನೆಗಳ ಖರೀದಿಗೆ ಶೇ 1ರಷ್ಟು ಜಿಎಸ್‌ಟಿಯನ್ನು ಈಗಿರುವ ₹ 45 ಲಕ್ಷದಿಂದ ₹75 ಲಕ್ಷದವರೆ ವಿಸ್ತರಿಸಬೇಕು
* ನಿರ್ಮಾಣ ಹಂತದಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ₹25 ಸಾವಿರ ಕೋಟಿ ಮೊತ್ತದ ಒತ್ತಡ ನಿಧಿ ತಕ್ಷಣವೇ ಬಿಡುಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.