ADVERTISEMENT

‘ಕ್ರೆಡಾಯ್‌’ನ ಬಜೆಟ್ ಪೂರ್ವ ನಿರೀಕ್ಷೆಗಳು: ವಸತಿ ಯೋಜನೆಗಳಿಗೆ ಉತ್ತೇಜನ ಅಗತ್ಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:10 IST
Last Updated 29 ಜನವರಿ 2020, 9:10 IST
ರಿಯಲ್‌ ಎಸ್ಟೇಟ್‌
ರಿಯಲ್‌ ಎಸ್ಟೇಟ್‌   

ಬೆಂಗಳೂರು: ದೇಶಿ ರಿಯಲ್ ಎಸ್ಟೇಟ್ ಕ್ಷೇತ್ರವು ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದೆ.

ಮನೆ ಖರೀದಿದಾರರಿಗೆ ಕೆಲವು ತೆರಿಗೆ ಪರಿಹಾರಗಳನ್ನು ನೀಡುವುದರ ಜತೆಗೆ ಕೈಗೆಟುಕುವ ವಸತಿಗಾಗಿ ಉತ್ತೇಜನ ಘೋಷಿಸುವ ಅಗತ್ಯವಿದೆ ಎಂದು ಭಾರತೀಯ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್‌) ಹೇಳಿದೆ.

ರಿಯಲ್ ಎಸ್ಟೇಟ್ ವಹಿವಾಟನ್ನು ಉದ್ಯಮ ಎಂದು ಪರಿಗಣಿಸುವುದು, ಯೋಜನೆಗಳಿಗೆ ಏಕ-ಗವಾಕ್ಷಿ ವ್ಯವಸ್ಥೆ ಮೂಲಕ ಅನುಮತಿ ನೀಡುವಂತಹ ದೀರ್ಘಕಾಲೀನ ನಿರೀಕ್ಷೆಗಳು ಇದುವರೆಗೂ ಈಡೇರಿಲ್ಲ. ಇಂತಹ ಕ್ರಮಗಳನ್ನು ಕೈಗೊಂಡರೆ ವಸತಿ ಮತ್ತು ಕಟ್ಟಡ ನಿರ್ಮಾಣ ಉದ್ದಿಮೆಯು ಪುನರುಜ್ಜೀವನಗೊಳ್ಳಲಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹ 25 ಸಾವಿರ ಕೋಟಿ ಮೊತ್ತದ ನೆರವಿನ ಘೋಷಣೆಯು ಈ ವಲಯಕ್ಕೆ ಸ್ವಲ್ಪ ಪರಿಹಾರವನ್ನು ನೀಡಿದೆ. ಜನರಲ್ಲಿ ಮನೆ ಖರೀದಿ ಭಾವನೆ ಉತ್ತೇಜಿಸುವಂತಹ ಇನ್ನಷ್ಟು ರಿಯಾಯ್ತಿಗಳನ್ನು ನೀಡಬೇಕಾಗಿದೆ ಎಂದು ಕಟ್ಟಡ ನಿರ್ಮಾಣಗಾರರು ನಿರೀಕ್ಷಿಸುತ್ತಿದ್ದಾರೆ.

ADVERTISEMENT

ತೆರಿಗೆ ಕಡಿತ

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್‍ನಲ್ಲಿ, ₹ 45 ಲಕ್ಷವರೆಗಿನ ಗೃಹ ಸಾಲಗಳಿಗೆ ಪಾವತಿಸುವ ಬಡ್ಡಿಗೆ ಗರಿಷ್ಠ ₹ 3.5 ಲಕ್ಷವರೆಗಿನ ತೆರಿಗೆ ಕಡಿತದ ಹೆಚ್ಚಳ ಘೋಷಿಸಿದ್ದರು. ‘ಪಿಎಂಎವೈ’ ಯೋಜನೆಯಡಿ ‘2022 ರ ವೇಳೆಗೆ ಎಲ್ಲರಿಗೂ ವಸತಿ’ ಭರವಸೆ ಈಡೇರಿಸಲು ಸರ್ಕಾರವು ಕೈಗೆಟುಕುವ ದರದ ವಸತಿ ಯೋಜನೆಗಳಿಗೆ ಉತ್ತೇಜನ ನೀಡಬೇಕಾಗಿದೆ’ ಎಂದು ‘ಕ್ರೆಡಾಯ್‌’ ಬೆಂಗಳೂರು ಘಟಕದ ಅಧ್ಯಕ್ಷ ಕಿಶೋರ್‌ ಜೈನ್‌ ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು (ರೇರಾ) ಬಲಪಡಿಸುವುದರ ಹೊರತಾಗಿ ಮಧ್ಯಮ ವರ್ಗದವರ ವಸತಿ ಅಗತ್ಯಗಳನ್ನು ಸರ್ಕಾರ ನಿರ್ಲಕ್ಷಿಸಿದೆ. ಮನೆಗಳ ಮಾರಾಟ ಹೆಚ್ಚಿಸಲು ಮಧ್ಯಮ ವರ್ಗಕ್ಕೆ ತೆರಿಗೆ ಮತ್ತು ಬಡ್ಡಿ ಪ್ರಯೋಜನಗಳನ್ನು ಹೆಚ್ಚಿಸುವುದನ್ನು ಈ ವಲಯವು ಎದುರು ನೋಡುತ್ತಿದೆ.

ನಿರ್ಮಾಣ ಸಾಮಗ್ರಿ ಮೇಲಿನ ಜಿಎಸ್‍ಟಿ ದರ ಕಡಿತ

ಕಟ್ಟಡ ನಿರ್ಮಾಣ ಸಾಮಗ್ರಿಗಳ ವೆಚ್ಚವು, ಕಚ್ಚಾ ವಸ್ತುಗಳ ಬೆಲೆ ಮತ್ತು ಖರೀದಿ ಶುಲ್ಕವನ್ನು ನೇರವಾಗಿ ಅವಲಂಬಿಸಿರುತ್ತದೆ. ಕೈಗೆಟುಕುವ ಮತ್ತು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಜಿಎಸ್‍ಟಿ ದರವನ್ನು ಸರ್ಕಾರ ಕಡಿಮೆಗೊಳಿಸಿದ್ದರೂ, ಸಿಮೆಂಟ್ (ಶೇ 28), ನೈರ್ಮಲ್ಯ ವಸ್ತುಗಳು (ಶೇ 18), ಉಕ್ಕು, ಬಾಗಿಲು, ಕಿಟಕಿಗಳು, ವಿದ್ಯುತ್ ಪರಿಕರ ಮುಂತಾದ ಸರಕುಗಳ ಮೇಲಿನ ದುಬಾರಿ ಜಿಎಸ್‍ಟಿಯು ಉದ್ದಿಮೆಯನ್ನು ಬಾಧಿಸುತ್ತಿದೆ. ಕಚ್ಚಾ ಸರಕು ಮತ್ತು ಕಚ್ಚಾ ಸರಕು ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸಬೇಕಾಗಿದೆ.

ಟೌನ್‍ಶಿಪ್ ಯೋಜನೆಯಲ್ಲಿ, ಎಲ್ಲಾ ಟವರ್‍ಗಳ ನಿರ್ಮಾಣ ಪೂರ್ಣಗೊಳ್ಳುವವರೆಗೆ ‘ರೇರಾ’ ನಿಯಮದಡಿ ಅದನ್ನು ಚಾಲ್ತಿಯಲ್ಲಿರುವ ಯೋಜನೆಯೆಂದು ಪರಿಗಣಿಸಬೇಕು. ನಿರ್ಮಾಣ ಹಂತದಲ್ಲಿದ್ದ ಯೋಜನೆಗಳ ಜಿಎಸ್‍ಟಿ ದರವನ್ನು ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ.

ಸಾಲದ ಬಿಕ್ಕಟ್ಟು

ಬ್ಯಾಂಕ್‌ಗಳ ಹಣಕಾಸು ನೆರವಿನ ಕೊರತೆಯಿಂದಾಗಿ, ನಿರ್ಮಾಣಗಾರರು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು (ಎನ್‍ಬಿಎಫ್‍ಸಿ) ನೆಚ್ಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ನೆರವಿನ ಮೂಲವೂ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ನಿರ್ಮಾಣ ಯೋಜನೆಗಳು ಮಂದಗತಿಯಲ್ಲಿ ಸಾಗಿವೆ. ನಗದು ಬಿಕ್ಕಟ್ಟು ನಿವಾರಿಸಬೇಕಾಗಿದೆ. ವಿದೇಶಿ ಹೂಡಿಕೆ ಹೆಚ್ಚಿಸಲು ಅವಕಾಶ ಕಲ್ಪಿಸಬೇಕಾಗಿದೆ.

ಗ್ರಾಹಕರಿಗೆ ವರ್ಗಾವಣೆಗೊಳ್ಳದ ರೆಪೊ ದರ ಕಡಿತ

ಹಿಂದಿನ ವರ್ಷ ಆರ್‌ಬಿಐ ಐದು ಬಾರಿ ರೆಪೊ ದರ ಕಡಿತ ಮಾಡಿದೆ. ಬ್ಯಾಂಕ್‌ಗಳು ಇದರ ಪ್ರಯೋಜನವನ್ನು ಸಾಲಗಾರರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸಿಲ್ಲ. ಇದರಿಂದ ಗೃಹ ಸಾಲಗಳ ಮೇಲಿನ ಬಡ್ಡಿ ದರಗಳು ನಿರೀಕ್ಷಿಸಿದ ಮಟ್ಟದಲ್ಲಿ ಅಗ್ಗವಾಗಿಲ್ಲ. ಈ ಬಿಕ್ಕಟ್ಟು ಬಗೆಹರಿಸಲೂ ಬಜೆಟ್‌ ಗಮನ ನೀಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.