ADVERTISEMENT

ಸಾಲ ನೀಡಿಕೆಗೆ ಸಿಗಲಿದೆ ವೇಗ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌

ಪಿಟಿಐ
Published 15 ಫೆಬ್ರುವರಿ 2020, 19:45 IST
Last Updated 15 ಫೆಬ್ರುವರಿ 2020, 19:45 IST
ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌  –ಪಿಟಿಐ ಚಿತ್ರ
ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌  –ಪಿಟಿಐ ಚಿತ್ರ   
""

ನವದೆಹಲಿ: ‘ಬ್ಯಾಂಕ್‌ಗಳ ಸಾಲ ನೀಡಿಕೆಯಲ್ಲಿ ಸುಧಾರಣೆ ಕಂಡುಬರುತ್ತಿದ್ದು, ಬಜೆಟ್‌ ಪ್ರಸ್ತಾವನೆಗಳಿಂದ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ ಬಳಿಕ ಆರ್‌ಬಿಐನ ಆಡಳಿತ ಮಂಡಳಿ ಸಭೆ ನಡೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಸಭೆಯಲ್ಲಿ ಭಾಗವಹಿಸಿದರು.

‘ಸದ್ಯಕ್ಕೆ, ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ಕಡಿತ ಮಾಡುವ ಪ್ರಕ್ರಿಯೆ ಬಹಳ ನಿಧಾನಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ADVERTISEMENT

ಬ್ಯಾಂಕ್‌ಗಳ ಸಾಲ ನೀಡಿಕೆಯಲ್ಲಿ ಚೇತರಿಕೆ ಕಂಡುಬರಲಿದೆ. ವಾಣಿಜ್ಯ ವಲಯಕ್ಕೆ ಸಾಲ ನೀಡಿಕೆಯು ಅಕ್ಟೋಬರ್‌ನಿಂದ ಹೆಚ್ಚಾಗುತ್ತಿದ್ದು ₹ 7.5 ಲಕ್ಷ ಕೋಟಿಗಳಷ್ಟಾಗಿದೆ. ಇದರಲ್ಲಿ ಅಕ್ಟೋಬರ್‌ ಜನವರಿ ಅವಧಿಯಲ್ಲಿಯೇ ₹ 6 ಲಕ್ಷ ಕೋಟಿಗಳಷ್ಟು ಸಾಲ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಹಣಕಾಸು ವರ್ಷಕ್ಕೆ ಅನುಗುಣವಾಗಿ ಕೇಂದ್ರೀಯ ಬ್ಯಾಂಕ್‌ನ ಲೆಕ್ಕಪತ್ರ ವರ್ಷವನ್ನು ಹೊಂದಿಸಿಕೊಳ್ಳುವಂತೆ ಆರ್‌ಬಿಐನ ಆಡಳಿತ ಮಂಡಳಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರದ ಪರಿಶೀಲನೆಗೂ ಕಳಹಿಸಲು ಒಪ್ಪಿಗೆ ನೀಡಿದೆ. ಸದ್ಯ, ಜುಲೈನಿಂದ ಜೂನ್‌ ಅವಧಿಯನ್ನು ಆರ್‌ಬಿಐ ಲೆಕ್ಕಪತ್ರ ವರ್ಷವಾಗಿ ಪರಿಗಣಿಸುತ್ತಿದೆ. ಕೇಂದ್ರ ಸರ್ಕಾರವು ಏಪ್ರಿಲ್‌ನಿಂದ ಮಾರ್ಚ್ ಅವಧಿಯನ್ನು ಹಣಕಾಸು ವರ್ಷವಾಗಿ ಪರಿಗಣಿಸುತ್ತಿದೆ.

‘ಗ್ರಾಮೀಣ ಪ್ರದೇಶಗಳಲ್ಲಿಬ್ಯಾಂಕ್‌ಗಳು ನೀಡುತ್ತಿರುವ ಕೃಷಿ ಸಾಲವನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ನಡೆಸುತ್ತಿದೆ’ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. ‘2020–21ನೇ ಹಣಕಾಸು ವರ್ಷಕ್ಕೆ ₹ 15 ಲಕ್ಷ ಕೋಟಿ ಕೃಷಿ ಸಾಲ ವಿತರಿಸುವ ಗುರಿಯನ್ನು ತಲುಪುವ ನಿರೀಕ್ಷೆ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.