ADVERTISEMENT

ಕ್ರಿಪ್ಟೊ ಮೈನಿಂಗ್ ವೆಚ್ಚಕ್ಕೆ ಇಲ್ಲ ತೆರಿಗೆ ವಿನಾಯಿತಿ

ಪಿಟಿಐ
Published 21 ಮಾರ್ಚ್ 2022, 19:32 IST
Last Updated 21 ಮಾರ್ಚ್ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕ್ರಿಪ್ಟೊಕರೆನ್ಸಿ ಮೈನಿಂಗ್‌ ಚಟುವಟಿಕೆಗೆ ಮಾಡಿದ ವೆಚ್ಚಗಳ ಲೆಕ್ಕ ನೀಡಿ, ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಹೇಳಿದ್ದಾರೆ.

ಕ್ರಿ‍ಪ್ಟೊ ಕರೆನ್ಸಿ ಮಾತ್ರವೇ ಅಲ್ಲದೆ, ಇತರ ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಗಳ (ವಿಡಿಎ) ಸೃಷ್ಟಿಗೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಮಾಡಿದ ವೆಚ್ಚವನ್ನು ಕೂಡ ತೆರಿಗೆ ವಿನಾಯಿತಿ ಪಡೆಯಲು ಬಳಸಿಕೊಳ್ಳುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು, ‘ಕೇಂದ್ರ ಸರ್ಕಾರವು ವರ್ಚುವಲ್ ಡಿಜಿಟಲ್ ಆಸ್ತಿ (ವಿಡಿಎ) ಅಂದರೆ ಏನು ಎಂಬ ಬಗ್ಗೆ ವ್ಯಾಖ್ಯಾನ ನೀಡಲಿದೆ. ಇಂತಹ ಆಸ್ತಿಗಳ ವರ್ಗಾವಣೆ ಮೂಲಕ ಪಡೆಯುವ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸುವ ಉದ್ದೇಶದೊಂದಿಗೆ ಈ ವ್ಯಾಖ್ಯಾನ ರೂಪಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಸದ್ಯದ ಸಂದರ್ಭದಲ್ಲಿ ದೇಶದಲ್ಲಿ ಕ್ರಿಪ್ಟೊ ಕರೆನ್ಸಿಗಳ ವಿಚಾರವಾಗಿ ಪ್ರತ್ಯೇಕ ಕಾನೂನು ಇಲ್ಲ, ನಿಯಂತ್ರಣವೂ ಇಲ್ಲ.

ADVERTISEMENT

ಕ್ರಿಪ್ಟೊ ಆಸ್ತಿಗಳ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ 2022–23ನೇ ಸಾಲಿನ ಬಜೆಟ್‌ನಲ್ಲಿ ಕೆಲವು ಸ್ಪಷ್ಟನೆಗಳನ್ನು ಒದಗಿಸಲಾಗಿದೆ. ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಕ್ರಿಪ್ಟೊ ಕರೆನ್ಸಿಗಳ ಮೇಲಿನ ಹೂಡಿಕೆಯಿಂದ ಬಂದ ಲಾಭಕ್ಕೆ ಶೇ 30ರಷ್ಟು ಆದಾಯ ತೆರಿಗೆ ಮತ್ತು ಸರ್ಚಾರ್ಜ್‌ ವಿಧಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ವಿಡಿಎ ವರ್ಗಾವಣೆ ಮೂಲಕ ಬರುವ ಆದಾಯವನ್ನು ಲೆಕ್ಕ ಹಾಕುವಾಗ, ವಿಡಿಎ ಖರೀದಿಗೆ ಮಾಡಿದ ವೆಚ್ಚವನ್ನು ಹೊರತುಪಡಿಸಿ, ಇತರ ಯಾವುದೇ ವೆಚ್ಚಗಳನ್ನು ವಿನಾಯಿತಿಗೆ ಪರಿಗಣಿಸಲು ಆಗದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ವಿಡಿಎ ಮೈನಿಂಗ್‌ಗೆ ಅಗತ್ಯವಿರುವ ಸಲಕರಣೆಗಳಿಗೆ ಮಾಡಿದ ವೆಚ್ಚವನ್ನು ‘ಖರೀದಿ ವೆಚ್ಚ’ ಎಂದು ಪರಿಗಣಿಸಲಾಗದು. ಅಂತಹ ವೆಚ್ಚಗಳನ್ನು ‘ಬಂಡವಾಳ ವೆಚ್ಚ’ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಒಂದು ವಿಡಿಎಯಲ್ಲಿ ಆದ ನಷ್ಟವನ್ನು ಇನ್ನೊಂದು ವಿಡಿಎ ವರ್ಗಾವಣೆಯಲ್ಲಿ ಬಂದಿರುವ ಲಾಭದ ಜೊತೆ ಸರಿಹೊಂದಿಸಿಕೊಳ್ಳಲಿಕ್ಕೆ ಸಹ ಅವಕಾಶ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.