ವಾಷಿಂಗ್ಟನ್ (ಪಿಟಿಐ/ ರಾಯಿಟರ್ಸ್): ‘ಕ್ರಿಪ್ಟೊ ಕರೆನ್ಸಿಗಳು ಆರ್ಥಿಕ ಹಾಗೂ ವಿತ್ತೀಯ ಸ್ಥಿರತೆಗೆ ಬಹುದೊಡ್ಡ ಅಪಾಯವನ್ನು ಉಂಟು ಮಾಡುತ್ತವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಅಮೆರಿಕದ ಪೀಟರ್ಸನ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಎಕನಾಮಿಕ್ಸ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ಕರೆನ್ಸಿಗಳ ಬಳಕೆಯಿಂದಾಗಿ ದೇಶದ ಆರ್ಥಿಕತೆಯಲ್ಲಿ ಹಣದ ಪೂರೈಕೆ ಮೇಲೆ ಹೊಂದಿರುವ ನಿಯಂತ್ರಣವನ್ನು ಕೇಂದ್ರೀಯ ಬ್ಯಾಂಕ್ ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಲಿದೆ. ಹಾಗಾಗಿ, ಹಣಕಾಸಿನ ವ್ಯವಸ್ಥೆಯಲ್ಲಿ ಕ್ರಿಪ್ಟೊ ಕರೆನ್ಸಿಗಳು ಪ್ರಾಬಲ್ಯ ಸಾಧಿಸಲು ಅನುಮತಿ ನೀಡಬಾರದು ಎಂಬುದು ನನ್ನ ಸಲಹೆಯಾಗಿದೆ’ ಎಂದರು.
ಹಣಕಾಸು ಹಾಗೂ ವಿತ್ತೀಯ ಸ್ಥಿರತೆಗೆ ಅಪಾಯ ಎದುರಾದರೆ ಬ್ಯಾಂಕಿಂಗ್ ವ್ಯವಸ್ಥೆಯು ಆಪತ್ತಿಗೆ ಸಿಲುಕಲಿದೆ. ಆರ್ಥಿಕತೆಗೆ ಹಣದ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಬ್ಯಾಂಕ್ ಹೊಂದಿರುವ ಅಧಿಕಾರವು ಮೊಟಕಾಗುವುದು ಒಳ್ಳೆಯದಲ್ಲ ಎಂದು ಹೇಳಿದರು.
ಈ ಅಧಿಕಾರ ಕಳೆದುಕೊಂಡರೆ ಆರ್ಥಿಕ ವ್ಯವಸ್ಥೆಯಲ್ಲಿನ ನಗದು ಲಭ್ಯತೆಯನ್ನು ಕೇಂದ್ರೀಯ ಬ್ಯಾಂಕ್ ಪರಿಶೀಲಿಸಲು ಹಾಗೂ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕ್ರಿಪ್ಟೊ ಕರೆನ್ಸಿಗಳ ವ್ಯವಹಾರವು ದೇಶಗಳ ನಡುವೆ ನಡೆಯುತ್ತದೆ. ಹಾಗಾಗಿ, ಅಂತರರಾಷ್ಟ್ರೀಯಮಟ್ಟದಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಬೇಕಿದೆ ಎಂದರು.
‘ಕ್ರಿಪ್ರೊ ಕರೆನ್ಸಿ ಬಳಕೆಯಿಂದ ಎದುರಾಗುವ ದೊಡ್ಡ ಅಪಾಯಗಳ ಕುರಿತು ಗಮನಹರಿಸುವ ಬಗ್ಗೆ ಅಂತರರಾಷ್ಟ್ರೀಯಮಟ್ಟದಲ್ಲಿ ತಿಳಿವಳಿಕೆ ರೂಪಿಸಬೇಕಿದೆ. ಹಾಗಾಗಿ, ಇದರ ಬಳಕೆಗೆ ನಾನು ಪ್ರೋತ್ಸಾಹ ನೀಡುವುದಿಲ್ಲ’ ಎಂದರು.
ಹಣಕಾಸಿನ ಸ್ಥಿರತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಸರ್ಕಾರಗಳು ಕೂಡ ಇದರ ಅಪಾಯವನ್ನು ಅರಿಯಬೇಕಿದೆ ಎಂದು ಹೇಳಿದರು.
‘ಭಾರತವು ಕ್ರಿಪ್ಟೊ ಕರೆನ್ಸಿ ವಿರುದ್ಧ ಧ್ವನಿ ಎತ್ತಿದ ಮೊದಲ ದೇಶವಾಗಿದೆ. ಜಿ20 ಶೃಂಗಸಭೆಯಲ್ಲಿ ಈ ಕರೆನ್ಸಿ ವ್ಯವಸ್ಥೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಯಮಾವಳಿ ರೂಪಿಸುವ ಬಗ್ಗೆ ಒಪ್ಪಂದವಾಗಿದೆ. ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.
‘ದೇಶದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗುತ್ತಿದೆ. ಆದರೆ ಅದನ್ನು ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ಜಾಗತಿಕ ಬಿಕ್ಕಟ್ಟು ಮತ್ತು ಹವಾಮಾನ ವೈಪರೀತ್ಯದಿಂದಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಆರ್‌ಬಿಐ ಇದರ ಮೇಲೆ ನಿಗಾವಹಿಸಿದೆ’ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಹಣದುಬ್ಬರ ನಿಯಂತ್ರಣ ಹಾಗೂ ಅದನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳಲು ದೇಶದ ಆರ್ಥಿಕ ಚೇತರಿಕೆಯು ಅನುವು ಮಾಡಿಕೊಟ್ಟಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.