ನವದೆಹಲಿ (ಪಿಟಿಐ): ‘ಮುಕ್ತ ವ್ಯಾಪಾರ ಒಪ್ಪಂದದಡಿ ಹೈನು ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಅವರು ಬುಧವಾರ ಅಲ್ಲಿನ ವ್ಯಾಪಾರ ಸಚಿವ ಡಾನ್ ಫಾರೆಲ್ ಅವರೊಟ್ಟಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಾರತದಲ್ಲಿ ಹೈನುಗಾರಿಕೆ ಸೂಕ್ಷ್ಮ ವಿಚಾರವಾಗಿದೆ. ಇದು ಸಣ್ಣ ಹಿಡುವಳಿದಾರರ ಜೀವನೋಪಾಯವನ್ನು ಅವಲಂಬಿಸಿದೆ’ ಎಂದು ಹೇಳಿದರು.
ಮಾರ್ಚ್‌ನಲ್ಲಿ ಭಾರತವು ಯುರೋಪಿಯನ್ ಮುಕ್ತ ವ್ಯಾಪಾರ ಸಂಘದೊಟ್ಟಿಗೆ ಸ್ವಿಡ್ಜರ್‌ಲೆಂಡ್ ಮತ್ತು ನಾರ್ವೆ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ, ಹೈನುಗಾರಿಕೆ ವಲಯಕ್ಕೆ ಸಂಬಂಧಿಸಿದ ಆಮದು ಸುಂಕದಲ್ಲಿ ವಿನಾಯಿತಿ ನೀಡುವುದಿಲ್ಲ ಎಂದರು.
‘ಆಸ್ಟ್ರೇಲಿಯಾಕ್ಕೂ ಈ ವಲಯದ ಸೂಕ್ಷ್ಮತೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಹೇಳಿದರು.
‘ಭಾರತದಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಿದೆ. 2ರಿಂದ 3 ಎಕರೆ ಜಮೀನು ಹೊಂದಿದ್ದು, ಮೂರ್ನಾಲ್ಕು ಜಾನುವಾರು ಸಾಕುತ್ತಾರೆ. ಆಸ್ಟ್ರೇಲಿಯಾದ ಹೈನು ಉದ್ಯಮ ದೊಡ್ಡದು. ದೊಡ್ಡ ರೈತರು ಹೈನುಗಾರಿಕೆ ಮಾಡುತ್ತಾರೆ. ಈ ರೈತರೊಟ್ಟಿಗೆ ಭಾರತದ ಸಣ್ಣ ಹಿಡುವಳಿದಾರರು ಸ್ಪರ್ಧೆ ಮಾಡಲು ಆಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.