ADVERTISEMENT

ಡಿಸೆಂಬರ್‌ಗೆ ರೆಪೊ ದರ ಇಳಿಕೆ?

ಸತತ 10ನೇ ಬಾರಿಗೆ ಬಡ್ಡಿದರ ಯಥಾಸ್ಥಿತಿ: ‘ತಟಸ್ಥ’ ನೀತಿಗೆ ಎಂಪಿಸಿ ಒಪ್ಪಿಗೆ

ಪಿಟಿಐ
Published 9 ಅಕ್ಟೋಬರ್ 2024, 15:19 IST
Last Updated 9 ಅಕ್ಟೋಬರ್ 2024, 15:19 IST
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ   

‌‌ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆಯು ಸತತ 10ನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಬುಧವಾರ ಮುಕ್ತಾಯಗೊಂಡ ಸಭೆಯಲ್ಲಿ ಆರು ಸದಸ್ಯರ ಪೈಕಿ ಐವರು ಸದಸ್ಯರು ಶೇ 6.5ರಲ್ಲಿಯೇ ರೆಪೊ ದರ ಉಳಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಗೃಹ, ವಾಹನ, ಕಾರ್ಪೊರೇಟ್‌ ಹಾಗೂ ಇತರೆ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಮತ್ತೆ ನಿರಾಸೆಯಾಗಿದೆ.

ಆರ್‌ಬಿಐ ಇಲ್ಲಿಯವರೆಗೆ ಚಿಲ್ಲರೆ ಹಣದುಬ್ಬರ ನಿಯಂತ್ರಿಸುವ ಮೂಲಕ ದೇಶದ ಆರ್ಥಿಕತೆಯ ಸ್ಥಿರತೆಗೆ ಒತ್ತು ನೀಡುವ ನಿಲುವು ತಳೆದಿತ್ತು (ವಿತ್‌​ಡ್ರಾವಲ್ ಆಫ್ ಅಕಾಮಡೇಷನ್). 2019ರ ಜೂನ್‌ನಿಂದಲೂ ಇದೇ ನೀತಿ ಪಾಲಿಸುತ್ತಿತ್ತು.

ADVERTISEMENT

ಸದ್ಯ ಸಮಿತಿಯ ಸದಸ್ಯರು ಸರ್ವಾನುಮತದಿಂದ ‘ತಟಸ್ಥ’ ನೀತಿಗೆ ಸಹಮತದ ಮುದ್ರೆ ಒತ್ತಿದ್ದಾರೆ. ಇದು ಬಡ್ಡಿದರ ಇಳಿಕೆಯ ಹಾದಿಯನ್ನು ಸುಗಮಗೊಳಿಸಿದೆ.

‘ಹಾಗಾಗಿ, ಡಿಸೆಂಬರ್‌ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರೆಪೊ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ’ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.

2023ರ ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ರೆಪೊ ದರವನ್ನು ಶೇ 6.25ರಿಂದ ಶೇ 6.5ಕ್ಕೆ ಹೆಚ್ಚಿಸಲಾಗಿತ್ತು. ಇಲ್ಲಿಯವರೆಗೂ ಯಾವುದೇ ಬದಲಾವಣೆ ಮಾಡಿಲ್ಲ.

ಕಳೆದ ತಿಂಗಳು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ ಶೇ 0.50ರಷ್ಟು ಬಡ್ಡಿದರವನ್ನು ಕಡಿತಗೊಳಿಸಿದೆ. 

ಆಹಾರ ಹಣದುಬ್ಬರ ಇಳಿಕೆ ನಿರೀಕ್ಷೆ: ‘ಸಭೆಯು ತನ್ನ ಆರ್ಥಿಕ ನೀತಿಯ ನಿಲುವಿನಲ್ಲಿ ಬದಲಾವಣೆ ಮಾಡಿದೆ. ಆದರೆ, ನಿಗದಿತ ಗುರಿಯೊಳಗೆ ಹಣದುಬ್ಬರ ನಿಯಂತ್ರಿಸುವತ್ತ ಗಮನ ಹರಿಸಲಿದೆ’ ಎಂದು ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದರು.

‘ಮುಂಬರುವ ತಿಂಗಳುಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ. ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಬದಲಾವಣೆಯ ಸಂಕೇತವಾಗಿರುವ ಕೋರ್‌ ಹಣದುಬ್ಬರವೂ ಇಳಿಕೆಯಾಗಲಿದೆ’ ಎಂದರು. 

‘ಆರ್‌ಬಿಐನ ಅತಿಹೆಚ್ಚು ಬಡ್ಡಿದರ ನೀತಿಯು ಆರ್ಥಿಕ ಬೆಳವಣಿಗೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ 18 ತಿಂಗಳ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ಸದೃಢಗೊಂಡಿವೆ. ಬೆಳವಣಿಗೆಗೆ ಅಡ್ಡಿಪಡಿಸಿರುವ ಯಾವುದೇ ಸಾಕ್ಷ್ಯಗಳಿಲ್ಲ’ ಎಂದರು. 

ಚಿಲ್ಲರೆ ಹಣದುಬ್ಬರ ಇಳಿಕೆಯ ಪಥದಲ್ಲಿದೆ. ಇದರಿಂದ ಸಭೆಯ ನಿಲುವು ಬದಲಾಗಿದೆ. ಆದರೆ ಈಗಲೇ ರೆಪೊ ದರ ಇಳಿಕೆ ಬಗ್ಗೆ ಮಾತನಾಡಲು ಸಾಧ್ಯವಿಲ್ಲ
ಶಕ್ತಿಕಾಂತ ದಾಸ್‌ ಆರ್‌ಬಿಐ ಗವರ್ನರ್‌

ಜಿಡಿಪಿ ಪರಿಷ್ಕರಣೆ ಇಲ್ಲ

ಹಣಕಾಸು ನೀತಿ ಸಮಿತಿ ಸಭೆಯು ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಪರಿಷ್ಕರಣೆ ಮಾಡಿಲ್ಲ. 2024–25ನೇ ಆರ್ಥಿಕ ವರ್ಷದಲ್ಲಿ ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಈ ಹಿಂದಿನ ಸಭೆಯಲ್ಲಿ ಅಂದಾಜಿಸಿತ್ತು. ಈ ಸಭೆಯಲ್ಲೂ ಯಥಾಸ್ಥಿತಿ ಕಾಯ್ದುಕೊಂಡಿದೆ.  ಜಿಡಿಪಿಯು ಮೊದಲ ತ್ರೈಮಾಸಿಕದಲ್ಲಿ 15 ತ್ರೈಮಾಸಿಕಗಳ ಕನಿಷ್ಠ ಮಟ್ಟವಾದ ಶೇ 6.7ರಷ್ಟು ದಾಖಲಾಗಿತ್ತು.

‘ಹಣದುಬ್ಬರದ ಕುದುರೆ’ಗೆ ಕಡಿವಾಣ

ಚಿಲ್ಲರೆ ಹಣದುಬ್ಬರದಲ್ಲೂ ಯಥಾಸ್ಥಿತಿ ಕಾಯ್ದುಕೊಂಡಿದ್ದು 2024–25ನೇ ಆರ್ಥಿಕ ವರ್ಷದಲ್ಲಿ ಶೇ 4.5ರಷ್ಟು ದಾಖಲಾಗಲಿದೆ ಎಂದು ಹೇಳಿದೆ. ಆರ್‌ಬಿಐ ಬೆಲೆಯ ಸ್ಥಿತಿಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ‘ಹಣದುಬ್ಬರದ ಕುದುರೆ’ಯನ್ನು ಕಟ್ಟಿಹಾಕುವ ಅಗತ್ಯವಿದೆ ಎಂದು ಶಕ್ತಿಕಾಂತ ದಾಸ್‌ ಪ್ರತಿಪಾದಿಸಿದ್ದಾರೆ. ನಿಗದಿತ ಮಿತಿಯೊಳಗೆ ವಾರ್ಷಿಕ ಹಣದುಬ್ಬರ ದರ ನಿಯಂತ್ರಿಸುವುದು ಆರ್‌ಬಿಐನ ಗುರಿಯಾಗಿದೆ. ಇದಕ್ಕೆ ಅನುಗುಣವಾಗಿ ವಿತ್ತೀಯ ನೀತಿಯನ್ನು ಸರಿಹೊಂದಿಸುತ್ತದೆ. 2016ರಿಂದಲೂ ಇದೇ ನೀತಿ ಅನುಸರಿಸಲಾಗುತ್ತಿದೆ. ಇದು 21ನೇ ಶತಮಾನದ ರಚನಾತ್ಮಕ ಸುಧಾರಣಾ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಷೇರುಪೇಟೆ ಕುಸಿತ

ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಬೆನ್ನಲ್ಲೇ ಬುಧವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಕುಸಿತ ಕಂಡಿವೆ.  ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 167 ಅಂಶ ಇಳಿಕೆ ಕಂಡು 81467 ಅಂಶಗಳಲ್ಲಿ ಸ್ಥಿರಗೊಂಡಿತು. ಆರಂಭಿಕ ವಹಿವಾಟಿನಲ್ಲಿ 684 ಅಂಶ ಏರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 31 ಅಂಶ ಇಳಿಕೆ ಕಂಡು 24981 ಅಂಶಗಳಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್‌ ಗುಚ್ಛದಲ್ಲಿನ ಐಟಿಸಿ ನೆಸ್ಲೆ ಇಂಡಿಯಾ ಎಚ್‌ಯುಎಲ್‌ ರಿಲಯನ್ಸ್ ಇಂಡಸ್ಟ್ರಿಸ್‌ ಎಲ್‌ ಆ್ಯಂಡ್ ಟಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. ಟಾಟಾ ಮೋಟರ್ಸ್‌ ಟೆಕ್‌ ಮಹೀಂದ್ರ ಎಸ್‌ಬಿಐ ಮಾರುತಿ ಸುಜುಕಿ ಬಜಾಜ್‌ ಫೈನಾನ್ಸ್‌ ಎಕ್ಸಿಸ್‌ ಬ್ಯಾಂಕ್‌ ಬಜಾಜ್‌  ಫಿನ್‌ಸರ್ವ್‌ ಮತ್ತು ಭಾರ್ತಿ ಏರ್‌ಟೆಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಯುಪಿಐ ಲೈಟ್‌ ವ್ಯಾಲೆಟ್‌ ಮಿತಿ ಏರಿಕೆ ತ್ವರಿತ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡಲು ಯುಪಿಐ ಲೈಟ್‌ ವ್ಯಾಲೆಟ್‌ ಮಿತಿಯನ್ನು ₹5 ಸಾವಿರಕ್ಕೆ ಮತ್ತು ಪ್ರತಿ ವಹಿವಾಟಿನ ಮಿತಿಯನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಪ್ರತಿ ವಹಿವಾಟಿನ ಮಿತಿ ₹500 ಇತ್ತು. ಯುಪಿಐ ಲೈಟ್‌ ವ್ಯಾಲೆಟ್‌ ಮಿತಿಯನ್ನು ₹2 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಯುಪಿಐ123ಪೇ (ಫೀಚರ್ ಫೋನ್‌) ಸೇವೆಯಲ್ಲಿನ ಪ್ರತಿ ವರ್ಗಾವಣೆ ಮಿತಿಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ. 2022ರ ಮಾರ್ಚ್‌ನಲ್ಲಿ ಫೀಚರ್‌ ಫೋನ್‌ ಬಳಕೆದಾರರಿಗೆ ಯುಪಿಐ123ಪೇ ಬಳಸಲು ಅವಕಾಶ ಕಲ್ಪಿಸಲಾಯಿತು. ಇದು ಪ್ರಸ್ತುತ 12 ಭಾಷೆಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.