ನವದೆಹಲಿ: ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಪರಿಗಣಿಸಿ ಮಾಲ್‌ಗಳಲ್ಲಿರುವ ಅಂಗಡಿಗಳನ್ನು ತೆರೆಯುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೈಗಾರಿಕೆ ಸಚಿವ ಪೀಯುಷ್ ಗೋಯಲ್ ಹೇಳಿದ್ದಾರೆ.
ಗುರುವಾರ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಗೋಯಲ್ ಚಿಲ್ಲರೆ ವ್ಯಾಪಾರಿಗಳ ಸಮಸ್ಯೆಯನ್ನೂ ಆಲಿಸಿದ್ದಾರೆ. ಲಾಕ್‍ಡೌನ್ ಸಡಿಲಿಕೆಯ ನಂತರವೂ ಚಿಲ್ಲರೆ ವ್ಯಾಪಾರಿಗಳೂ ಕಷ್ಟ ಅನುಭವಿಸಲಿದ್ದಾರೆ ಎಂದು ಹೇಳಿದ ಅವರು ಅತ್ಯಾವಶ್ಯಕ ಮತ್ತು ಅವಶ್ಯಕವಲ್ಲದ ವಸ್ತುಗಳ ಮಾರಾಟ ಎಂಬ ವರ್ಗೀಕರಣ ಮಾಡದೆ ಬಹುತೇಕ ಅಂಗಡಿಗಳನ್ನು ತೆರೆಯುವಂತೆ ಮಾಡಲಾಗುವುದು.
ಆರೋಗ್ಯ ಸಚಿವಾಲಯದ ನಿರ್ದೇಶನದ ಪ್ರಕಾರ ಮಾಲ್‌ಗಳಲ್ಲಿರುವ ಅಂಗಡಿಗಳನ್ನು ತೆರೆಯುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯ ನೀಡಲು ₹3 ಲಕ್ಷ ಸಾಲ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಆದಾಗ್ಯೂ,ಇ- ಕಾಮರ್ಸ್‌ಗಳ ಭರಾಟೆ ಬಗ್ಗೆ ಹೆದರಬೇಡಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಹತ್ತಿರದ ಕಿರಾಣಿ ಅಂಗಡಿಯವರೇ ಸಹಾಯ ಮಾಡಿದ್ದರು ಎಂದು ಸಾಮಾನ್ಯ ವ್ಯಕ್ತಿಗೆ ಅರ್ಥವಾಗಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಸಹಾಯ ನೀಡುವ ಸಲುವಾಗಿ ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ವ್ಯವಸ್ಥೆ ಆರಂಭಿಸಲು ಸರ್ಕಾರ ಚಿಂತಿಸುತ್ತಿದೆ. ಅದೇ ವೇಳೆ ಸಾಲದ ಕಾಲಾವಧಿ, ಮುದ್ರಾ ಸಾಲದ ಬಗ್ಗೆ ವಿತ್ತ ಸಚಿವಾಲಯ ಪರಿಹಾರವನ್ನು ಸೂಚಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.