ಬಾಗಲಕೋಟೆ: ವೀಳ್ಯದೆಲೆ ಬೆಲೆ ಕುಸಿತವು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.
ಕಳೆದ ವರ್ಷದ ಜೂನ್, ಜುಲೈ ತಿಂಗಳಿನಲ್ಲಿ ಪ್ರತಿ ಡಾಗ್ (12 ಸಾವಿರ ಎಲೆ) ₹7 ಸಾವಿರದಿಂದ ₹8 ಸಾವಿರಕ್ಕೆ ಮಾರಾಟ ಆಗಿತ್ತು. ಈಗ ದರವು ₹1,500ಕ್ಕೆ ಕುಸಿದಿದೆ.
ಜಿಲ್ಲೆಯ ಜಗದಾಳ, ನಾವಲಗಿ ಭಾಗದಲ್ಲಿ ಬೆಳೆಯುವ ವೀಳ್ಯದೆಲೆಯನ್ನು ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು, ಸತಾರಾ, ಬೆಳಗಾವಿ ಸೇರಿದಂತೆ ಹಲವು ಸ್ಥಳಗಳಿಗೆ ಪೂರೈಸಲಾಗುತ್ತದೆ. ಆದರೆ, ಈ ಬಾರಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದಲ್ಲಿ ವೀಳ್ಯದೆಲೆಯ ಉತ್ತಮ ಫಸಲು ಬಂದಿದೆ. ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಕಾರಣ ಬೆಲೆ ಕುಸಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಾರೆ.
‘ಒಂದು ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲು ವರ್ಷಕ್ಕೆ ₹3 ಲಕ್ಷ ಖರ್ಚಾಗುತ್ತದೆ. ತಿಪ್ಪೆ ಗೊಬ್ಬರ ಹೆಚ್ಚು ಹಾಕಬೇಕು. ಸದ್ಯ ಸಣ್ಣ ಟ್ರಕ್‌ಗೆ ₹7 ಸಾವಿರ ಇದ್ದರೆ, ಕುರಿ ಗೊಬ್ಬರಕ್ಕೆ ₹18 ಸಾವಿರ ದರ ಇದೆ. ಪ್ರತಿ ವರ್ಷ ಹೊಸ ಮಣ್ಣು ಹಾಕಬೇಕು. ಇದಕ್ಕಾಗಿ ಕೂಲಿಯಾಳು ಬೇಕಿರುವ ಕಾರಣ ಖರ್ಚು ಹೆಚ್ಚಿದೆ’ ಎಂದು ಜಗದಾಳದ ರೈತ ಸದಾಶಿವ ಮಲ್ಲಪ್ಪ ಬಂಗಿ ತಿಳಿಸಿದರು.
ಬೆಲೆ ಕುಸಿದಿದ್ದರೂ ಕಟಾವು ಮಾಡಲೇಬೇಕು. ಇಲ್ಲದಿದ್ದರೆ ಬಳ್ಳಿಯಲ್ಲೇ ವೀಳ್ಯದೆಲೆಗಳು ಕೊಳೆಯುತ್ತವೆ. ನಷ್ಟವಾದರೂ ಮಾರಬೇಕು-ಸದಾಶಿವ ಬಂಗಿ, ರೈತ ಜಗದಾಳ ಬಾಗಲಕೋಟೆ ಜಿಲ್ಲೆ
‘ವರ್ಷಕ್ಕೆ ಒಂದು ಎಕರೆಯಲ್ಲಿ 120ರಿಂದ 150 ಡಾಗ್ ಫಸಲು ಬರುತ್ತದೆ. ಮಳೆ ಕಡಿಮೆಯಾಗಿದ್ದರಿಂದ ಈ ಬಾರಿ ಅಷ್ಟೊಂದು ಫಸಲು ಬಂದಿಲ್ಲ. ಜೊತೆಗೆ, ಧಾರಣೆಯೂ ಕುಸಿದಿರುವುದು ಸಂಕಷ್ಟಕ್ಕೆ ದೂಡಿದೆ’ ಎಂದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ
ಭಾಷೆಯ ಸಮಸ್ಯೆಯಿರುವ ಕಾರಣ ಬಹುತೇಕ ರೈತರು ಬೇರೆ ರಾಜ್ಯಗಳಿಗೆ ವೀಳ್ಯದೆಲೆ ಮಾರಲು ಹೋಗುವುದಿಲ್ಲ. ಹಾಗಾಗಿ, ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಗೆ ಮಾರಬೇಕಾದ ಪರಿಸ್ಥಿತಿ ಇದೆ. ಸರ್ಕಾರವು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ವೀಳ್ಯದೆಲೆ ಬೆಳೆಗಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.