ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಜೊತೆಗಿನ ₹ 24,713 ಕೋಟಿ ಮೌಲ್ಯದ ಒಪ್ಪಂದದ ವಿಚಾರವಾಗಿ ಮುಂದಡಿ ಇರಿಸುವಂತೆ ಇಲ್ಲ ಎಂದು ಫ್ಯೂಚರ್ ರಿಟೇಲ್ ಲಿಮಿಟೆಡ್‌ಗೆ ಸಿಂಗಪುರದ ಮಧ್ಯಸ್ಥಿಕೆ ಕೇಂದ್ರ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಫ್ಯೂಚರ್ ಸಮೂಹವು ತನ್ನ ಕೆಲವು ವಹಿವಾಟುಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡಲು ಮುಂದಾಗಿತ್ತು. ಇದಕ್ಕೆ ಅಮೆಜಾನ್ ಕಂಪನಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಫ್ಯೂಚರ್ ಸಮೂಹವು ಮಧ್ಯಸ್ಥಿಕೆ ಕೇಂದ್ರದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಫ್ಯೂಚರ್ ಸಮೂಹ ಮತ್ತು ಅದರ ಆಡಳಿತ ಮಂಡಳಿಯ ನಿರ್ದೇಶಕರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಒದಗಿಸಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ₹ 20 ಲಕ್ಷ ಜಮಾ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಏಪ್ರಿಲ್ 28ರಂದು ವಿಚಾರಣೆಗೆ ನಿರ್ದೇಶಕರು ಹಾಜರಿರಬೇಕು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೂಡ ಆದೇಶ ನೀಡಿದೆ.
ಸಿಂಗಪುರದ ಮಧ್ಯಸ್ಥಿಕೆ ಕೇಂದ್ರ ನೀಡಿರುವ ಆದೇಶವನ್ನು ಅನುಷ್ಠಾನಕ್ಕೆ ತರುವಂತೆ ಮಾಡಬೇಕು ಎಂದು ಕೋರಿ ಅಮೆಜಾನ್, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.