ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ): ಮಲೆನಾಡಿನ ರೈತರಿಗೆ ಉಪ ಆದಾಯ ತಂದುಕೊಡುವ ಬಾಳೆಕಾಯಿಗೆ ಸದ್ಯ ಬೇಡಿಕೆ ಇದ್ದರೂ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ತೋಟ, ರೈತರ ಮನೆಯ ಅಂಗಳದಲ್ಲೇ ಕೊಳೆಯುತ್ತಿವೆ.
ಮೇ ತಿಂಗಳವರೆಗೆ ಶುಭ ಕಾರ್ಯ, ಜಾತ್ರೆ ಮತ್ತು ಉತ್ಸವಗಳು ನಡೆಯುವ ಕಾರಣ ಬಾಳೆಹಣ್ಣುಗಳಿಗೆ ಬೇಡಿಕೆ ಇರುತ್ತದೆ. ಆದರೆ, ಒಂದು ವಾರದಿಂದ ಮಾರುಕಟ್ಟೆ ಮತ್ತು ವ್ಯಾಪಾರಿಗಳು ಬಾಳೆಕಾಯಿ ಖರೀದಿಸುತ್ತಿಲ್ಲ.
ತಾಲ್ಲೂಕಿನಲ್ಲಿ 622 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಮಲೆನಾಡಿನ ಗ್ರಾಮಗಳ ರೈತರಿಂದ ಬಾಳೆಕಾಯಿ ಖರೀದಿಸುವ ರೈತರು ಅವುಗಳನ್ನು ಗೋವಾ, ಕರಾವಳಿ ಭಾಗಕ್ಕೆ ಪೂರೈಸುತ್ತಾರೆ. ಅತಿ ಬಿಸಿಲಿನಿಂದ ಬಾಳೆಕಾಯಿ ಸಾಗಣೆ ಮಾಡುವ ಅವಧಿಯಲ್ಲೇ ಹಣ್ಣಾಗುತ್ತಿರುವುದು ವ್ಯಾಪಾರಿಗಳನ್ನು ಚಿಂತೆಗೆ ತಳ್ಳಿದೆ. ಹಣ್ಣು ಕಡಿಮೆ ಅವಧಿಯಲ್ಲೇ ಕೊಳೆಯುವ ಕಾರಣ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ.
‘ತಾಪಮಾನ ಹೆಚ್ಚಳದಿಂದ ಬಾಳೆಕಾಯಿ ಬೇಗ ಹಾಳಾಗುತ್ತವೆ. ಸಾಗಣೆ, ದಾಸ್ತಾನು ಮಾಡುವುದರಿಂದ ಲಾಭಕ್ಕಿಂತ ನಷ್ಟ ಹೆಚ್ಚು. ಮಳೆ ಆರಂಭವಾದರೆ, ಇಳುವರಿ ಕಡಿಮೆಯಾಗಿ ಬೆಲೆ ಹೆಚ್ಚುತ್ತದೆ’ ಎಂದು ವ್ಯಾಪಾರಿ ನಾಗಪತಿ ಹೆಗಡೆ ತಿಳಿಸಿದರು.
‘ಎರಡು ವರ್ಷಗಳ ಹಿಂದೆ ಹೊಸದಾಗಿ ಎರಡು ಎಕರೆಯಷ್ಟು ಪ್ರದೇಶಕ್ಕೆ ಅಡಿಕೆ ಗಿಡಗಳನ್ನು ನೆಟ್ಟಿದ್ದೇವೆ. ಅಡಿಕೆಯಿಂದ ಆದಾಯ ಬರಲು ಇನ್ನೂ 4 ವರ್ಷ ಕಾಯಬೇಕು. ಹೀಗಾಗಿ, ಉಪ ಬೆಳೆಯಾಗಿ ಬಾಳೆ ಬೆಳೆಯುತ್ತಿದ್ದೇವೆ. ತಿಂಗಳಿಗೆ ಸರಿಸುಮಾರು ₹ 4 ಸಾವಿರದಷ್ಟು ಆದಾಯ ಬಾಳೆಕಾಯಿ ಬೆಳೆಯಿಂದ ಸಿಗುತಿತ್ತು. ಈ ಆದಾಯ ಅಡಿಕೆ ಗಿಡಗಳ ನಿರ್ವಹಣೆಗೆ ಸಹಕಾರಿ ಆಗುತಿತ್ತು. ಬಾಳೆಕಾಯಿಗೆ ದರ ಕುಸಿದಿದ್ದು ಈಗ ಕೊಳ್ಳುವವರೇ ಇಲ್ಲದಂತಾಗಿದೆ. ತೋಟದ ನಿರ್ವಹಣೆ ಕಷ್ಟವಾಗಿದೆ’ ಎಂದು ತಾಲ್ಲೂಕಿನ ಕಬ್ಬಗಾರಿನ ಕೃಷಿಕ ಗುರುಮೂರ್ತಿ ನಾಯ್ಕ ತಿಳಿಸಿದರು.
ರೈತರು ಬಾಳೆಕಾಯಿಯ ಮೌಲ್ಯವರ್ಧನೆಯತ್ತ ಗಮನಹರಿಸಬೇಕು. ಬಾಳೆಕಾಯಿ ಸುಕೇಳಿ ಚಿಪ್ಸ್ ಹಪ್ಪಳ ಮುಂತಾದ ಉತ್ಪನ್ನಗಳನ್ನು ತಯಾರಿಸಿದರೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಬಹುದು.-ಪ್ರಶಾಂತ ಜಿ.ಎಸ್, ತೋಟಗಾರಿಕೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.