ನವದೆಹಲಿ: ‘ಕೋವಿಡ್–19’ ಪಿಡುಗಿನ ಕಾರಣಕ್ಕೆ ಗ್ರಾಹಕರಲ್ಲಿ ವೈಯಕ್ತಿಕ ಬಳಕೆಗೆ ಕಾರ್ ಖರೀದಿಸುವ ಪ್ರವೃತ್ತಿ ಹೆಚ್ಚಲಿದೆ ಎಂದು ವಾಹನ ತಯಾರಿಸುವ ಪ್ರಮುಖ ಕಂಪನಿಗಳು ನಿರೀಕ್ಷಿಸಿವೆ.
ಲಾಕ್‌ಡೌನ್ ಸಡಿಲಿಕೆ ನಂತರದ ದಿನಗಳಲ್ಲಿ ಜನರು ಅಂತರ ಕಾಯ್ದುಕೊಳ್ಳಲು ಮತ್ತು ಸೋಂಕಿಗೆ ಒಳಗಾಗದಿರುವುದನ್ನು ತಡೆಯಲು ಸಮೂಹ ಸಾರಿಗೆ ಬಳಸದಿರಲು ಹೆಚ್ಚು ಒಲವು ತೋರಿಸಲಿದ್ದಾರೆ ಎನ್ನುವುದು ಕಾರ್ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಇಂಡಿಯಾ, ಹುಂಡೈ ಮೋಟರ್ಸ್, ಟೊಯೋಟ ಕಿರ್ಲೋಸ್ಕರ್ ಮತ್ತು ಟಾಟಾ ಮೋಟರ್ಸ್ ಕಂಪನಿಗಳ ನಿರೀಕ್ಷೆಯಾಗಿದೆ.
‘ದಿನನಿತ್ಯದ ಓಟಾಡಕ್ಕೆ ಜನರು ವೈಯಕ್ತಿಕ ವಾಹನಗಳನ್ನು ಖರೀದಿಸಲಿದ್ದಾರೆ. ಈ ಉದ್ದೇಶಕ್ಕೆ ಕಡಿಮೆ ಬೆಲೆಯ ಕಾರ್ ಖರೀದಿಗೆ ಹೆಚ್ಚು ಒಲವು ಹೊಂದಿರುವುದು ನಾವು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ’ ಎಂದು ದೇಶದ ಅತಿದೊಡ್ಡ ಕಾರ್ ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾದ (ಎಂಸ್‌ಐ) ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರು ಹೇಳಿದ್ದಾರೆ.
‘ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಇರುವುದು ವಾಹನ ಖರೀದಿಸುವವರ ಖರೀದಿ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ವಾಹನಗಳ ವೈಯಕ್ತಿಕ ಬಳಕೆ ವಿಭಾಗದಲ್ಲಿ ಬೇಡಿಕೆಯು ಈಗ ಕಡಿಮೆ ಬೆಲೆಯ ಮತ್ತು ಸಣ್ಣ ಗಾತ್ರದ ವಾಹನಗಳತ್ತ ಕೇಂದ್ರೀಕೃತಗೊಳ್ಳಲಿದೆ.
’ಮೊದಲ ಬಾರಿಗೆ ಕಾರ್ ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರಲಿದೆ. ಸಣ್ಣ ಗಾತ್ರದ ಕಾರ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ಇತ್ತೀಚೆಗೆ ಪುನರಾರಂಭಿಸಿರುವ ಕಂಪನಿಯ 1,800 ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರಲ್ಲಿ ಬದಲಾದ ಈ ಧೋರಣೆ ನಮ್ಮ ಅನುಭವಕ್ಕೆ ಬಂದಿದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಗ್ರಾಹಕರು, ಜನಮಾನಸದಲ್ಲಿ ತಮ್ಮ ಛಾಪು ಮೂಡಿಸಿರುವ ಜನಪ್ರಿಯ ಬ್ರ್ಯಾಂಡ್‌ಗಳತ್ತ ಹೆಚ್ಚು ಆಕರ್ಷಿತರಾಗುವುದು ಈ ಮೊದಲೂ ಸಾಬೀತಾಗಿದೆ’ ಎಂದು ಹೇಳಿದ್ದಾರೆ.
‘ಬಾಡಿಗೆ ಆಧಾರಿತ ಟ್ಯಾಕ್ಸಿ, ಸಹ ಪ್ರಯಾಣಿಕರ ಜತೆ ಕಾರ್ ಹಂಚಿಕೊಂಡು ಪ್ರಯಾಣಿಸುವ ಸೌಲಭ್ಯ (ಕಾರ್ ಪೂಲಿಂಗ್) ಮತ್ತು ಸಮೂಹ ಸಾರಿಗೆಯಿಂದ ಗ್ರಾಹಕರು ಈಗ ವಿಮುಖರಾಗುತ್ತಿದ್ದಾರೆ. ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ತಮ್ಮ ವೈಯಕ್ತಿಕ ಬಳಕೆಗೆ ಸ್ವಂತ ಕಾರ್ ಬಳಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ವಾಹನ ಮಾರುಕಟ್ಟೆಯ ಪರಿಸ್ಥಿತಿ ಅಂದಾಜಿಸಲು ಇನ್ನಷ್ಟು ಸಮಯ ಬೇಕಾಗಿದೆ’ ಎಂದು ಹೋಂಡಾ ಕಾರ್ಸ್ ಇಂಡಿಯಾದ (ಎಚ್‌ಸಿಐಎಲ್) ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್ ಹೇಳಿದ್ದಾರೆ.
‘ಕಾಯಿಲೆ ಭೀತಿ, ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದು ಇನ್ನು ಮುಂದೆ ಗ್ರಾಹಕರ ವಾಹನ ಬಳಕೆಯ ಮನೋಭಾವ ನಿರ್ಧರಿಸಲಿವೆ. ಈ ಮನಸ್ಥಿತಿಯು ನಗರದ ಒಳಗೆ ಮತ್ತು ನಗರದಿಂದ ನಗರಕ್ಕೆ ಸಂಚರಿಸುವುದರ ಮೇಲೆಯೂ ಪ್ರಭಾವ ಬೀರಲಿದೆ. ಖರೀದಿ ಆದ್ಯತೆಯು ಬರೀ ಕಡಿಮೆ ಬೆಲೆಯ ಕಾರ್‌ಗಳಿಗೆ ಮಾತ್ರ ಸೀಮಿತಗೊಂಡಿರುವುದಿಲ್ಲ. ಎಲ್ಲ ಬಗೆಯ ಕಾರ್‌ಗಳಿಗೂ ಬೇಡಿಕೆ ಹೆಚ್ಚಲಿದೆ’ ಎಂದು ಟೊಯೋಟ ಕಿರ್ಲೋಸ್ಕರ್ ಕಂಪನಿಯ (ಟಿಕೆಎಂ) ವಕ್ತಾರ ತಿಳಿಸಿದ್ದಾರೆ.
‘ಸಾರಿಗೆ ಬಳಕೆ ಬಗ್ಗೆ ಗ್ರಾಹಕರ ಮನೋಭಾವದಲ್ಲಿ ಈಗ ಗಮನಾರ್ಹ ಬದಲಾವಣೆ ಕಂಡು ಬಂದಿದೆ. ಸಮೂಹ ಸಾರಿಗೆ ಮತ್ತು ಬಾಡಿಗೆ ಟ್ಯಾಕ್ಸಿ ಬಳಸುವ ಪ್ರವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ’ ಎಂದು ಟಾಟಾ ಮೋಟರ್ಸ್ ವಕ್ತಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.