ನವದೆಹಲಿ (ಪಿಟಿಐ): ಗೋ ಫಸ್ಟ್ ಕಂಪನಿಗೆ ಕೆಲವು ಷರತ್ತುಗಳೊಂದಿಗೆ ಮತ್ತೆ ಕಾರ್ಯಾಚರಣೆ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ತಿಳಿಸಿದೆ.
15 ವಿಮಾನಗಳೊಂದಿಗೆ ನಿತ್ಯವೂ 114 ಬಾರಿ ವಿಮಾನ ಹಾರಾಟ ನಡೆಸಲು ಕೆಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಲಾಗಿದೆ ಎಂದು ಡಿಜಿಸಿಎ ಪ್ರಕಟಣೆ ತಿಳಿಸಿದೆ. ಮೇ 3ರಂದು ವಿಮಾನ ಸೇವೆ ನಿಲ್ಲಿಸಿರುವ ಕಂಪನಿಯು ದಿವಾಳಿ ಪ್ರಕ್ರಿಯೆಗೆ ಒಳಗಾಗಿದೆ.
ದೆಹಲಿ ಹೈಕೋರ್ಟ್ ಮತ್ತು ಎನ್‌ಸಿಎಲ್‌ಟಿನಲ್ಲಿ ಕಂಪನಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಬಾಕಿ ಇದ್ದು, ಅಲ್ಲಿ ಹೊರಬೀಳುವ ತೀರ್ಪಿಗೆ ಈ ಒಪ್ಪಿಗೆಯು ಒಳಪಟ್ಟಿರಲಿದೆ ಎಂದು ಅದು ಹೇಳಿದೆ.
ಕಂಪನಿಯ ಬಳಿ ಇರುವ ಮಧ್ಯಂತರ ಬಂಡವಾಳದೊಂದಿಗೆ ಡಿಜಿಸಿಎ ಒಪ್ಪಿಗೆ ನೀಡುವ ವೇಳಾಪಟ್ಟಿಯಂತೆ ಕಾರ್ಯಚರಣೆ ಆರಂಭಿಸಬಹುದಾಗಿದೆ. ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಯಾಚರಣೆ ನಡೆಸಲಿರುವ ವಿಮಾನಗಳು ಹಾರಾಟ ನಡೆಸಲು ಯೋಗ್ಯವಾಗಿವೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳುವಂತೆಯೂ ಡಿಜಿಸಿಎ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.