ನವದೆಹಲಿ: ಪೈಲಟ್‌ಗಳ ಕರ್ತವ್ಯ ಹಾಗೂ ವಿಶ್ರಾಂತಿ ಕುರಿತಂತೆ ರೂಪಿಸಿರುವ ಪರಿಷ್ಕೃತ ನಿಯಮಾವಳಿಗಳನ್ನು ವಿಮಾನಯಾನ ಕಂಪನಿಗಳು ಜೂನ್ 1ರಿಂದ ಕಡ್ಡಾಯವಾಗಿ ಜಾರಿಗೊಳಿಸಬೇಕಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಸೂಚಿಸಿದೆ.
ನಿಯಮಾವಳಿಗಳ ಜಾರಿಗೆ ನಿಗದಿಪಡಿಸಿರುವ ದಿನಾಂಕವನ್ನು ಮತ್ತೆ ವಿಸ್ತರಿಸುವುದಿಲ್ಲ. ಹಾಗಾಗಿ, ಏಪ್ರಿಲ್ 15ರೊಳಗೆ ಕಂಪನಿಗಳಿಂದ ಸಿದ್ಧಪಡಿಸಿರುವ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸಬೇಕಿದೆ ಎಂದು ಹೇಳಿದೆ.
ವಿಮಾನಗಳ ಹಾರಾಟ ಅವಧಿಯ ಹೆಚ್ಚಳದಿಂದಾಗಿ ಒತ್ತಡಕ್ಕೆ ಸಿಲುಕುತ್ತಿದ್ದ ಪೈಲಟ್‌ಗಳಿಗೆ ವಿಶ್ರಾಂತಿ ಸಿಗುತ್ತಿರಲಿಲ್ಲ. ಹಾಗಾಗಿ, ಮುಂಜಾಗ್ರತೆಯಾಗಿ ಅವಘಡಗಳನ್ನು ತಡೆಯುವ ಉದ್ದೇಶದಿಂದ ಪೈಲಟ್‌ಗಳ ವಿಶ್ರಾಂತಿ ಅವಧಿಗೆ ಸಂಬಂಧಿಸಿದಂತೆ ಜನವರಿ 8ರಂದು ಡಿಜಿಸಿಎ ಪರಿಷ್ಕೃತ ನಿಯಮಾವಳಿಗಳನ್ನು ಪ್ರಕಟಿಸಿತ್ತು.
ಆದರೆ, ಈ ನಿಯಮಾವಳಿಗಳ ಜಾರಿಗೆ ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಇಂಡಿಗೊ ಕಂಪನಿಯು ಹೆಚ್ಚಿನ ಸಮಯಾವಕಾಶ ಕೋರಿದ್ದವು.
ಪರಿಷ್ಕೃತ ನಿಯಮಾವಳಿಗಳ ಅನ್ವಯ ಪೈಲಟ್‌ಗಳಿಗೆ ಈಗಿರುವ ವಾರದ ವಿಶ್ರಾಂತಿ ಅವಧಿಯನ್ನು 36 ಗಂಟೆಯಿಂದ 48 ಗಂಟೆವರೆಗೆ ಹೆಚ್ಚಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ನಿಯಮಾವಳಿಗಳ ಜಾರಿ ಕುರಿತಂತೆ ತ್ರೈಮಾಸಿಕಕ್ಕೊಮ್ಮೆ ಡಿಜಿಸಿಎಗೆ ವರದಿ ಸಲ್ಲಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.