ಮುಂಬೈ: ಈ ಬಾರಿಯ ಧನ್‌ತೆರಸ್‌ನಲ್ಲಿ (ಧನ ತ್ರಯೋದಶಿ) ಚಿನ್ನಾಭರಣಗಳ ಬೇಡಿಕೆ ತಗ್ಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಮತ್ತು ಉದ್ಯಮವಲಯ ಅಭಿಪ್ರಾಯಪಟ್ಟಿದೆ.
ಚಿನ್ನದ ಬೆಲೆ ಏರಿಕೆ ಮತ್ತು ಇತರೆ ಹೂಡಿಕೆ ಆಯ್ಕೆಗಳ ಆಕರ್ಷಣೆಯ ಕಾರಣಕ್ಕೆ ಮಾರುಕಟ್ಟೆಯಲ್ಲಿ ನಗದು ಕೊರತೆ ಉಂಟಾಗಿದ್ದು, ಚಿನ್ನಾಭರಣ ಖರೀದಿಸುವವರ ಸಂಖ್ಯೆಯಲ್ಲಿ ಇಳಿಕೆ ಕಾಣಲಿದೆ ಎಂದಿದ್ದಾರೆ.
2017ರಲ್ಲಿ ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದಾಗಿ ಧನ್‌ತೆರಸ್ ಅವಧಿಯಲ್ಲಿ ಚಿನ್ನಾಭರಣ ಮಾರಾಟ ಶೇ 30ರಷ್ಟು ಇಳಿಕೆಯಾಗಿತ್ತು.
ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಈ ಪವಿತ್ರ ದಿನದ ಸಂದರ್ಭದಲ್ಲಿ ಚಿನ್ನ, ಬೆಳ್ಳಿ, ಇನ್ನಿತರೆ ಆಭರಣಗಳನ್ನು ಖರೀದಿಸುವುದು ಶುಭಕರ
ಎಂದು ಭಾವಿಸಲಾಗುತ್ತದೆ. ನವೆಂಬರ್ 5ರಂದು (ಸೋಮವಾರ) ಧನ್‌ತೆರಸ್ ಇರಲಿದೆ.
‘ಮಾರುಕಟ್ಟೆಯಲ್ಲಿ ನಗದು ಕೊರತೆ ಉಂಟಾಗಿರುವುದರಿಂದ ಈ ಬಾರಿಯ ಧನ್‌ತೆರಸ್‌ನಲ್ಲಿ ಉತ್ತಮ ವಹಿವಾಟು ನಿರೀಕ್ಷಿಸುವುದು ಕಷ್ಟ. ಕಳೆದ ವರ್ಷಕ್ಕಿಂತಲೂ ಶೇ 5 ರಿಂದ ಶೇ 10ರವರೆಗೂ ಇಳಿಕೆ ಕಾಣುವ ಸಾಧ್ಯತೆ ಇದೆ’ ಎಂದು ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ದೇಶಿ ಸಮಿತಿ (ಜಿಜೆಸಿ) ಅಧ್ಯಕ್ಷ ನಿತಿನ್ ಖಂಡೇಲ್ವಾಲ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.