ಮುಂಬೈ: ನಿರ್ದೇಶಕ ಮಂಡಳಿ ರದ್ದುಪಡಿಸಿರುವ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಡಿಎಚ್‌ಎಫ್‌ಎಲ್‌ಗೆ ನೇಮಿಸಿರುವ ಆಡಳಿತಗಾರನಿಗೆ ನೆರವಾಗಲು ಭಾರತೀಯ ರಿಸರ್ವ್ ಬ್ಯಾಂಕ್ ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿದೆ.
ಬ್ಯಾಂಕ್, ಮ್ಯೂಚುವಲ್ ಫಂಡ್, ನ್ಯಾಷನಲ್ ಹೌಸಿಂಗ್ ಬೋರ್ಡ್ ಮತ್ತು ಬಾಂಡ್ ಹೊಂದಿರುವವರಿಗೆ ಡಿಎಚ್‌ಎಫ್‌ಎಲ್ ಪಾವತಿಸಬೇಕಾದ ₹ 83,873 ಕೋಟಿ ವಸೂಲಿ ಮಾಡಲು ಈ ಸಲಹಾ ಸಮಿತಿಯು ಆಡಳಿತಗಾರನಿಗೆ ನೆರವಾಗಲಿದೆ.
ಡಿಎಚ್‌ಎಫ್‌ಎಲ್, ಬ್ಯಾಂಕ್‌ಗಳಿಂದ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಸಂಗ್ರಹಿಸಿರುವ ಸಾಲ ಮರುಪಾವತಿಸಲು ವಿಫಲವಾಗಿದೆ. ಸಾಲ ನೀಡಿದ ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್‌ಗಳು ತಮ್ಮ ಪಾಲಿನ ಸಾಲನ್ನು ಷೇರುಗಳನ್ನಾಗಿ ಪರಿವರ್ತಿಸಿ ಕಂಪನಿಯಲ್ಲಿ ಶೇ 51ರಷ್ಟು ಪಾಲು ಬಂಡವಾಳ ಹೊಂದಲು ಉದ್ದೇಶಿಸಿವೆ. ಈ ಆಲೋಚನೆಗೆ ಇನ್ನೂ ಒಪ್ಪಿಗೆ ಸಿಗಬೇಕಾಗಿದೆ.
ಡಿಎಚ್‌ಎಫ್‌ಎಲ್‌ನ ನಿರ್ದೇಶಕ ಮಂಡಳಿಯನ್ನು ರದ್ದು ಮಾಡಿರುವ ಆರ್‌ಬಿಐ, ದಿವಾಳಿ ಸಂಹಿತೆಯಡಿ (ಐಬಿಸಿ) ಈ ಬಿಕ್ಕಟ್ಟು ಬಗೆಹರಿಸುವುದಾಗಿ ತಿಳಿಸಿದೆ. ಕಾರ್ಪೊರೇಟ್ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಆಡಳಿತಗಾರನಿಗೆ ನೆರವಾಗಲು ಸಲಹಾ ಸಮಿತಿ ರಚಿಸಲು ಅವಕಾಶ ಇದೆ. ದಿವಾಳಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆಗೆ ಒಳಪಟ್ಟಿರುವ ಮೊದಲ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಇದಾಗಿದೆ.
ಹಣಕಾಸು ಸಂಸ್ಥೆಗಳಿಗೆ ಡಿಎಚ್‌ಎಫ್‌ಎಲ್ ಪಾವತಿಸಬೇಕಾಗಿರುವ ಸಾಲದ ಒಟ್ಟು ಮೊತ್ತ₹ 83,873 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.