ಮುಂಬೈ: ಕೋವಿಡ್–19 ಸೋಂಕು ಸ್ವಲ್ಪ ಇಳಿಮುಖವಾದ ನಂತರ ಜನರ ಚಿತ್ತ ಪ್ರವಾಸೋದ್ಯಮದತ್ತ ನೆಟ್ಟಿದ್ದು, ಇದರಿಂದಾಗಿ ಹೊಳೆವ ವಜ್ರವೂ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇಲ್ಲದೆ ಮಂಕಾಗಿದೆ ಎಂದು ಝಿಮಿನಸ್ಕಿ ಜಾಗತಿಕ ವಜ್ರ ಸೂಚ್ಯಂಕ ಸಂಸ್ಥೆಯ ವರದಿ ಹೇಳಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ 2023ರಲ್ಲಿ ವಜ್ರದ ಬೇಡಿಕೆ ಇಳಿಮುಖವಾಗಿದೆ. ವಿಲಾಸಿ ವಸ್ತುಗಳ ಖರೀದಿಗೆ ಜನರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ವಜ್ರದ ಬೆಲೆ ಇಳಿಮುಖವಾಗಿದೆ. ಇದಕ್ಕೆ ಪ್ರಮುಖ ಕಾರಣ ಕೋವಿಡ್ ಕಾಲದಿಂದ ಈಚೆಗೆ ಜನರು ತಿನಿಸು ಮತ್ತು ಪ್ರವಾಸಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದೇ ಆಗಿದೆ ಎಂದು ವರದಿಯಲ್ಲಿ ಹೇಳಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ.
ವಜ್ರ ವಿಶ್ಲೇಷಕ ಪೌಲ್ ಝಿಮಿನಸ್ಕಿ ಅವರ ಪ್ರಕಾರ, ‘ಕೋವಿಡ್ ಸಂದರ್ಭದಲ್ಲಿ ಊಟೋಪಚಾರ ಹಾಗೂ ಪ್ರವಾಸ ಸಾಧ್ಯವಾಗದ ಕಾರಣ ಜನರು ವಿವೇಚನಾಯುತರಾಗಿ ಹಣ ಖರ್ಚು ಮಾಡುತ್ತಿದ್ದರು. ಈಗ ಉಳಿದಿರುವ ಸಾಕಷ್ಟು ಹಣವನ್ನು ಅಗತ್ಯವಲ್ಲದ ವಸ್ತುಗಳ ಖರೀದಿಯತ್ತ ಹೊರಳಿಸಿದ್ದಾರೆ’ ಎಂದಿದ್ದಾರೆ.
ಮತ್ತೊಬ್ಬ ವಜ್ರ ವಿಶ್ಲೇಷಕ ಎಡಾನ್ ಗೋಲನ್ ಪ್ರತಿಕ್ರಿಯಿಸಿ, ‘ವಜ್ರ ಎಂಬುದು ಸಂಪೂರ್ಣವಾಗಿ ಗ್ರಾಹಕ ಕೇಂದ್ರಿತ ಮಾರುಕಟ್ಟೆ. ಗ್ರಾಹಕರು ಪಾಲಿಶ್ ಆಗದ ವಜ್ರದ ಬೆಲೆಯನ್ನು ಅಪೇಕ್ಷಿಸುತ್ತಿದ್ದಾರೆ. ಆದರೆ ಚಿಲ್ಲರೆ ವ್ಯಾಪಾರಿಗಳು ಸಾಕಷ್ಟು ಹಣವನ್ನು ಜಾಹೀರಾತುಗಳಿಗೆ ವೆಚ್ಚ ಮಾಡಿರುವುದರಿಂದ, ಮೂಲ ಬೆಲೆಗೆ ಕೊಡುವುದು ಅಸಾಧ್ಯ’ ಎಂದಿದ್ದಾರೆ.
‘ವಜ್ರದ ಬೆಲೆ ಕುಸಿದಿದ್ದರೂ ಅದರ ಪ್ರಯೋಜನ ಗ್ರಾಹಕರಿಗೆ ಆಗುತ್ತಿಲ್ಲ. ಕಚ್ಚಾ ವಜ್ರದ ಬೆಲೆ ಕುಸಿದಿದ್ದರೂ, ವಜ್ರದ ಚಿಲ್ಲರೆ ವ್ಯಾಪಾರಿಗಳು ಒಂದು ಬೆಲೆಯನ್ನು ನಿಗದಿಪಡಿಸಿದ್ದಾರೆ. ಅದರಲ್ಲಿ ಅವರ ಲಾಭಾಂಶವೂ ಒಳಗೊಂಡಿದೆ. 2024ರ ಚಳಿಗಾಲದ ನಂತರ ವಜ್ರದ ಬೆಲೆ ಏರುವ ಸಾಧ್ಯತೆ ಇದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.