ಬೆಂಗಳೂರು: ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕ ಆಧರಿಸಿದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ನಡುವಣ ಅಂತರವು ದಿನೇ ದಿನೇ ಹೆಚ್ಚುತ್ತಿದೆ.
ಅಕ್ಟೋಬರ್‌ನಲ್ಲಿ ‘ಸಿಪಿಐ’ ಶೇ 4.62ರಷ್ಟಾಗಿ 16 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ‘ಡಬ್ಲ್ಯುಪಿಐ’ ಶೇ 0.16ರಷ್ಟು ಕಡಿಮೆಯಾಗಿದೆ. ಈ ಎರಡೂ ಬಗೆಯ ಹಣದುಬ್ಬರಗಳ ನಡುವಣ ಅಂತರವು ಕಳೆದ ಎರಡು ವರ್ಷಗಳಲ್ಲಿಯೇ ಹೆಚ್ಚಿನ ಮಟ್ಟಕ್ಕೆ ತಲುಪಿದೆ.
ಮುಂಬರುವ ದಿನಗಳಲ್ಲಿ ‘ಡಬ್ಲ್ಯುಪಿಐ’ ಇನ್ನಷ್ಟು ಕಡಿಮೆಯಾಗಲಿದೆ ಎಂಬುದು ಬಹುತೇಕ ವಿಶ್ಲೇಷಕರ ಎಣಿಕೆಯಾಗಿದೆ. ಆರ್ಥಿಕ ನೀತಿ ನಿರೂಪಣೆಯಲ್ಲಿ ‘ಡಬ್ಲ್ಯುಪಿಐ’ದ ಮಹತ್ವ ಕ್ರಮೇಣ ಕಡಿಮೆಯಾಗುತ್ತಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್, ‘ಸಿಪಿಐ’ ಪರಿಗಣಿಸಿಯೇ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ನಿಗದಿಪಡಿಸುತ್ತಿದೆ.
ಸಗಟು ಬೆಲೆ ಹಣದಿಳಿತವು, ಸರಕುಗಳ ತಯಾರಕರ ಬೆಲೆ ನಿಗದಿ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತಿದೆ. ಗ್ರಾಹಕರ ಖರೀದಿ ಪ್ರಮಾಣ, ವೆಚ್ಚದ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ತಯಾರಕರು ಬೆಲೆ ಕಡಿತ ಘೋಷಿಸುತ್ತಿದ್ದಾರೆ. ಈ ವರ್ಷದ ಏಪ್ರಿಲ್– ಜೂನ್ ಅವಧಿಯಲ್ಲಿನ ಗ್ರಾಹಕರು ಮಾಡುವ ವೆಚ್ಚವು 4 ವರ್ಷಗಳಲ್ಲಿಯೇ ಕಡಿಮೆ ಮಟ್ಟದಲ್ಲಿತ್ತು.
ಕಾರ್ ತಯಾರಕರು ಮಾರಾಟ ಕುಸಿತ ತಡೆಯಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಲೆಯಲ್ಲಿ ಭಾರಿ ಕಡಿತ ಘೋಷಿಸಿದ್ದರು. ಸೆಪ್ಟೆಬರ್‌ನಲ್ಲಿನ ಕಾರ್ಖಾನೆಗಳ ಉತ್ಪಾದನೆಯೂ ಕುಸಿತ ಕಂಡಿದೆ. ಕೈಗಾರಿಕೆಗಳ ಒಟ್ಟಾರೆ ಉತ್ಪಾದನೆಯು 7 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
‘ಡಬ್ಲ್ಯುಪಿಐ’ ಮತ್ತು ‘ಸಿಪಿಐ’– ಇವೆರಡೂ ವಿಭಿನ್ನ ಸ್ವರೂಪದ ಮಾನದಂಡಗಳಾಗಿವೆ. ‘ಡಬ್ಲ್ಯುಪಿಐ’ನಲ್ಲಿ ತಯಾರಿಕಾ ಸರಕುಗಳು ಗರಿಷ್ಠ ಪಾಲು (ಶೇ 54.23) ಹೊಂದಿವೆ. ‘ಸಿಪಿಐ’ನಲ್ಲಿ ಆಹಾರ ಮತ್ತು ಪಾನೀಯಗಳ ಪಾಲು ಶೇ 54.18ರಷ್ಟಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣಕ್ಕೆ ಕೃಷಿ ಉತ್ಪನ್ನಗಳ ಪೂರೈಕೆಯಲ್ಲಿ ಕೊರತೆ ಉಂಟಾದರೆ ಅದರಿಂದ ಚಿಲ್ಲರೆ ಹಣದುಬ್ಬರದ ಮೇಲೆ ಅಸಮತೋಲನದ ಪರಿಣಾಮ ಕಂಡು ಬರುತ್ತದೆ.
ಬೆಲೆ ಏರಿಕೆಯು ಮೊದಲು ಸಗಟು ಮಾರುಕಟ್ಟೆಯಲ್ಲಿ ಕಂಡು ಬರುವುದರಿಂದ ಚಿಲ್ಲರೆ ಆಹಾರ ಹಣದುಬ್ಬರವು, ಸಗಟು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳಿಂದ ಹೆಚ್ಚು ಪ್ರಭಾವಿತಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.