ADVERTISEMENT

2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹ ಏರಿಕೆ

ಪಿಟಿಐ
Published 21 ಏಪ್ರಿಲ್ 2024, 15:20 IST
Last Updated 21 ಏಪ್ರಿಲ್ 2024, 15:20 IST
   

ನವದೆಹಲಿ: ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ನಿವ್ವಳ ಸಂಗ್ರಹವು ₹19.58 ಲಕ್ಷ ಕೋಟಿ ಆಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಭಾನುವಾರ ತಿಳಿಸಿದೆ.

2022–23ನೇ ಆರ್ಥಿಕ ವರ್ಷದಲ್ಲಿ ₹16.64 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 17.7ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.

2023–24ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹18.23 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಫೆಬ್ರುವರಿ 1ರಂದು ಮಂಡಿಸಿದ್ದ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಇದನ್ನು ಪರಿಷ್ಕರಿಸಿ ₹19.45 ಲಕ್ಷ ಕೋಟಿ ಸಂಗ್ರಹಕ್ಕೆ ಗುರಿ ನಿಗದಿಪಡಿಸಲಾಗಿತ್ತು. ಇದನ್ನು ಮೀರಿ ಗುರಿ ಸಾಧನೆಯಾಗಿದೆ.

ADVERTISEMENT

ಬಜೆಟ್‌ ಗುರಿಯನ್ನು ಮೀರಿ ₹1.35 ಲಕ್ಷ ಕೋಟಿ ಸಂಗ್ರಹಿಸಲಾಗಿದೆ (ಶೇ 7.40ರಷ್ಟು). ಅಲ್ಲದೆ, ಮಧ್ಯಂತರ ಬಜೆಟ್‌ನಲ್ಲಿ ಪರಿಷ್ಕರಿಸಿದ್ದಕ್ಕಿಂತಲೂ ಹೆಚ್ಚುವರಿಯಾಗಿ ₹13 ಸಾವಿರ ಕೋಟಿಗೂ ಹೆಚ್ಚು ಸಂಗ್ರಹವಾಗಿದೆ ಎಂದು ವಿವರಿಸಿದೆ.

2023–24ರಲ್ಲಿ ನೇರ ತೆರಿಗೆಯ ಸರಾಸರಿ ಸಂಗ್ರಹವು ₹19.72 ಲಕ್ಷ ಕೋಟಿಯಿಂದ ₹23.37 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 18.48ರಷ್ಟು ಏರಿಕೆಯಾಗಿದೆ. ತೆರಿಗೆ ಮರುಪಾವತಿ (ರೀಫಂಡ್‌) ಮೊತ್ತ ₹3.79 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

ತೆರಿಗೆ ಸಂಗ್ರಹದ ಹೆಚ್ಚಳವು ಆರ್ಥಿಕತೆಯ ಚೇತರಿಕೆಗೆ ಕನ್ನಡಿ ಹಿಡಿದಿದೆ. ಅಲ್ಲದೆ  ವೈಯಕ್ತಿಕ ಆದಾಯ ಹಾಗೂ ಕಾರ್ಪೊರೇಟ್‌ ಕಂಪನಿಗಳ ಆದಾಯದ ಮಟ್ಟ  ಏರಿಕೆಯಾಗಿರುವ ಸೂಚಕವಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ. 

ಕಾರ್ಪೊರೇಟ್‌ ತೆರಿಗೆಯ ನಿವ್ವಳ ಸಂಗ್ರಹವು ಶೇ 10.26ರಷ್ಟು ಹಾಗೂ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ಶೇ 25.23ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.