ADVERTISEMENT

ನೇರ ತೆರಿಗೆ ಸಂಗ್ರಹ: ದಶಕದಲ್ಲಿ ಶೇ 182ರಷ್ಟು ಏರಿಕೆ

ಪಿಟಿಐ
Published 17 ಅಕ್ಟೋಬರ್ 2024, 14:26 IST
Last Updated 17 ಅಕ್ಟೋಬರ್ 2024, 14:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:‌‌ ಕಳೆದ ಹತ್ತು ವರ್ಷದ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ 182ರಷ್ಟು ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇಲಾಖೆಯು ಗುರುವಾರ ಈ ಕುರಿತು ವಾರ್ಷಿಕವಾರು ತೆರಿಗೆ ಸಂಗ್ರಹದ ಪಟ್ಟಿ ಪ್ರಕಟಿಸಿದೆ. ಈ ಅವಧಿಯಲ್ಲಿ ಕಾರ್ಪೊರೇಟ್‌ ತೆರಿಗೆ ಸಂಗ್ರಹವು ದ್ವಿಗುಣಗೊಂಡಿದ್ದರೆ, ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. 

2023–24ನೇ ಆರ್ಥಿಕ ವರ್ಷದಲ್ಲಿ ₹19.60 ಲಕ್ಷ ಕೋಟಿ ಸಂಗ್ರಹವಾಗಿದೆ. ಈ ಪೈಕಿ ಕಾರ್ಪೊರೇಟ್‌ ತೆರಿಗೆ ₹9.11 ಲಕ್ಷ ಕೋಟಿ ಹಾಗೂ ವೈಯಕ್ತಿಕ ಆದಾಯ ತೆರಿಗೆಯು ₹10.45 ಲಕ್ಷ ಕೋಟಿ ಸಂಗ್ರಹವಾಗಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, 2014–15ರ ಆರ್ಥಿಕ ವರ್ಷದಲ್ಲಿ ₹6.96 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸಿತ್ತು. ಈ ಪೈಕಿ ₹4.29 ಲಕ್ಷ ಕೋಟಿ ಕಾರ್ಪೊರೇಟ್‌ ತೆರಿಗೆ ಹಾಗೂ ವೈಯಕ್ತಿಕ ಆದಾಯ ತೆರಿಗೆಯು ₹2.66 ಲಕ್ಷ ಕೋಟಿ ಸಂಗ್ರಹವಾಗಿತ್ತು.

2014–15ರಲ್ಲಿ 4.04 ಕೋಟಿ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಾಗಿದ್ದವು. 2023–24ರಲ್ಲಿ 8.16 ಕೋಟಿ ರಿಟರ್ನ್ಸ್‌ ಸಲ್ಲಿಕೆಯಾಗಿವೆ. ತೆರಿಗೆ ಪಾವತಿದಾರರ ಸಂಖ್ಯೆಯು 5.70 ಕೋಟಿಯಿಂದ 10.41 ಕೋಟಿಗೆ ಹೆಚ್ಚಳವಾಗಿದೆ.

ನೇರ ತೆರಿಗೆ ಮತ್ತು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಅನುಪಾತವು ಶೇ 5.55ರಿಂದ ಶೇ 6.64ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.