ADVERTISEMENT

ನೇರ ತೆರಿಗೆ ಸಂಗ್ರಹ ಹೆಚ್ಚಳ, ಜುಲೈ 11ರ ವರೆಗೆ ₹5.74 ಲಕ್ಷ ಕೋಟಿ ಸಂಗ್ರಹ: CBDT

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:37 IST
Last Updated 13 ಜುಲೈ 2024, 15:37 IST
   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜುಲೈ 11ರ ವರೆಗೆ ₹5.74 ಲಕ್ಷ ಕೋಟಿ ನೇರ ತೆರಿಗೆ ನಿವ್ವಳ ಸಂಗ್ರಹವಾಗಿದ್ದು, ಇದರಲ್ಲಿ ಕಾರ್ಪೊರೇಟ್‌ ತೆರಿಗೆಯ ಪಾಲು ಹೆಚ್ಚಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ₹4.80 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ ₹19.54ರಷ್ಟು ಹೆಚ್ಚಳವಾಗಿದೆ.

ಜೂನ್‌ 15ರ ವರೆಗಿನ ಮುಂಗಡ ತೆರಿಗೆ ಪಾವತಿಯಲ್ಲಿ ₹1.48 ಲಕ್ಷ ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹ ಪ್ರಮಾಣದಲ್ಲಿ ಶೇ 27.34‌‌ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಕಂಪನಿಗಳ ವರಮಾನ ತೆರಿಗೆ (ಸಿಐಟಿ) ₹1.14 ಲಕ್ಷ ಕೋಟಿ ಹಾಗೂ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 34,470 ಕೋಟಿ ಇದೆ.

ADVERTISEMENT

ಒಟ್ಟು ₹5.74 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ. ಈ ಪೈಕಿ ಕಂಪನಿಗಳ ವರಮಾನ ತೆರಿಗೆ ₹2.10 ಲಕ್ಷ ಕೋಟಿ ಹಾಗೂ ವೈಯಕ್ತಿಕ ಆದಾಯ ತೆರಿಗೆ ₹3.46 ಲಕ್ಷ ಕೋಟಿ ಇದೆ ಎಂದು ಶನಿವಾರ ಬಿಡುಗಡೆಯಾಗಿರುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ವರದಿ ತಿಳಿಸಿದೆ.

ಷೇರು ವಹಿವಾಟು ತೆರಿಗೆ (ಎಸ್‌ಟಿಟಿ)  ₹16,634 ಕೋಟಿ ಸಂಗ್ರಹವಾಗಿದೆ ಎಂದು ತಿಳಿಸಿದೆ.

₹70,902 ಕೋಟಿ ಮರುಪಾವತಿ (ರೀಫಂಡ್‌) ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮರುಪಾವತಿ ಪ್ರಮಾಣವು ಶೇ 64.4ರಷ್ಟು ಹೆಚ್ಚಿದೆ.

ಏಪ್ರಿಲ್‌ನಿಂದ ಜುಲೈ 11ರ ವರೆಗೆ ನೇರ ತೆರಿಗೆಯ ಸರಾಸರಿ ಸಂಗ್ರಹವು (ರೀಫಂಡ್‌ಗೂ ಮುಂಚೆ) ₹6.45 ಲಕ್ಷ ಕೋಟಿ ಆಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹5.23 ಲಕ್ಷ ಕೋಟಿ ಸಂಗ್ರಹವಾಗಿತ್ತು. ಒಟ್ಟಾರೆ ಶೇ 23.24ರಷ್ಟು ಏರಿಕೆಯಾಗಿದೆ.

ಫೆಬ್ರುವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ 2024–25ನೇ ಆರ್ಥಿಕ ವರ್ಷಕ್ಕೆ ₹21.99 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.