ಇಂಡಿ:ಕಡು ಬೇಸಿಗೆಯ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮತ್ತಷ್ಟು ಹೆಚ್ಚುವ ಸಾಧ್ಯತೆ ದಟ್ಟೈಸಿದೆ. ಹಗಲು–ರಾತ್ರಿ ಮನೆಯೊಳಗೆ ಕೂರದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಬಡವರು, ಮಧ್ಯಮ ವರ್ಗದವರ ಪಾಲಿಗೆ ಫ್ಯಾನ್ ಆಸರೆಯಾಗಿವೆ. ಆದರೂ ಬಿಸಿಲ ಧಗೆ ತಾಳಲಾಗುತ್ತಿಲ್ಲ. ಕಠಿಣ ಪರಿಸ್ಥಿತಿಯಿದ್ದರೂ; ಕೂಲರ್‌ಗೆ ಮೊರೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬ್ರ್ಯಾಂಡೆಡ್ ಕಂಪನಿಯ ಏರ್ ಕೂಲರ್ ಖರೀದಿ ಕನಸಿನ ಮಾತು. ಬಡವರಿಗಾಗಿಯೇ ಪಟ್ಟಣದ ಕುಂಬಾರ ಓಣಿಯ ಅನಿಲ ವಿಠ್ಠಲರಾವ ರಾಠೋಡ ಕಡಿಮೆ ದರದ ಏರ್ ಕೂಲರ್ ತಯಾರಿಸುತ್ತಿದ್ದು, ಇದೀಗ ಬೇಡಿಕೆ ಹೆಚ್ಚಿದೆ. ಏರ್ ಕೂಲರ್ ಉದ್ಯಮ ಅನಿಲ ಬದುಕಿನ ಚಿತ್ರಣವನ್ನೇ ಬದಲಿಸಿದೆ.
ಏರ್ ಕೂಲರ್ ಸಿದ್ದಪಡಿಸಲು ಅಗತ್ಯವಿರುವ ಮೋಟರ್, ವಾಟರ್ ಪಂಪ್, ವುಡ್ ವಾಲ್ (ಹುಲ್ಲು), ಬಾಡಿ ಪಾರ್ಟ್ಸ್, ಬಟನ್, ವೈರ್, ವಾಟರ್ ಟಬ್, ಸೈಡ್ ಜಾಳಗಿ... ಹೀಗೆ ಅಗತ್ಯವಿರುವ ಸಾಮಗ್ರಿಗಳನ್ನು ಸೊಲ್ಲಾಪುರ, ಹೈದರಾಬಾದ್‌ನಿಂದ ರಾಶಿ ರಾಶಿ ಖರೀದಿಸಿ ತಂದು, ತಮ್ಮ ಅಂಗಡಿಯಲ್ಲೇ ‘ಡಿಜರ್ಟ್ ಕೂಲರ್’ ತಯಾರಿಸಿ ಮಾರಾಟ ಮಾಡುವ ಕಲೆಯನ್ನು ಎಂಟು ವರ್ಷಗಳಿಂದ ಕರಗತ ಮಾಡಿಕೊಂಡಿದ್ದಾರೆ ಅನಿಲ.
ಪ್ರತಿ ವರ್ಷ ಕನಿಷ್ಠ 1500 ಏರ್ ಕೂಲರ್ ಸಿದ್ಧಗೊಳಿಸಿ, ತಲಾ ಒಂದಕ್ಕೆ ₹ 3000 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ರಾಠೋಡ. ಒಂದು ವರ್ಷದವರೆಗೆ ಉಚಿತ ಸರ್ವೀಸ್ ಈ ಕೂಲರ್‌ಗಳಿಗೆ. ಕೂಲರ್ ತಯಾರಿಕೆಯ ಉದ್ಯಮದಲ್ಲೇ ಬದುಕು ಕಟ್ಟಿಕೊಳ್ಳುತ್ತಿರುವ ಅನಿಲ ಇದೀಗ ಬಡವರ ಪಾಲಿನ ಬೇಸಿಗೆಯ ಬಂಧುವಾಗಿದ್ದಾರೆ.
ಸಿರಿವಂತರು ಇಲ್ಲಿ ಕೂಲರ್ ಖರೀದಿಸುವುದು ನಡೆದಿದೆ. ನೌಕರರು ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಎಲ್ಲೆಡೆಯಿಂದಲೂ ಚಲೋ ಎಂಬ ಅಭಿಪ್ರಾಯವೇ ಕೇಳಿ ಬಂದಿರುವುದು ಅನಿಲ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಕೂಲರ್ ಜೋಡಣೆಯ ಕಾರ್ಯಕ್ಕೆ ಅನಿಲ ಪತ್ನಿ ಬನಶಂಕರಿ ಸಹ ಸಾಥ್ ನೀಡುತ್ತಿದ್ದಾರೆ. ಕೂಲರ್‌ನ ಸೈಡ್ ಹುಲ್ಲು ಜೋಡಣೆ ಕೆಲಸವನ್ನು ಮನೆಯಲ್ಲಿಯೇ ಮಾಡುತ್ತಾರೆ. ಒಂದು ಕೂಲರ್ ಜೋಡಿಸಲು ಕನಿಷ್ಠ ಅರ್ಧ ತಾಸು ಸಾಕು.
ಈ ಉದ್ಯಮಕ್ಕೆ ಅನಿಲ ಯಾರೊಬ್ಬರಿಂದಲೂ ಆರ್ಥಿಕ ಸಹಕಾರ ಪಡೆದಿಲ್ಲ. ಲಭ್ಯ ಬಂಡವಾಳದಲ್ಲೇ ನಡೆಸಿದ್ದಾರೆ. ಕೆಲಸ ಹೆಚ್ಚಿದ್ದಾಗ ಮಾತ್ರ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಉಳಿದಂತೆ ಮನೆ–ಮಂದಿಯೇ ಒಟ್ಟಾಗಿ ಕೂಲರ್ ಜೋಡಿಸುತ್ತಾರೆ.
ಅನಿಲ ನಾಗರ ಪಂಚಮಿ ಹಬ್ಬದ ಸಂದರ್ಭ ಕಡಲೆ ಖರೀದಿಸಿ, ಪುಟಾಣಿ ಮಾಡಿ ಮಾರಾಟ ಮಾಡುತ್ತಾರೆ. ಶೇಂಗಾ ಬಿಡಿಸುವ ಯಂತ್ರವನ್ನು ಖರೀದಿಸಿದ್ದು, ವರ್ಷಕ್ಕೆ ಎರಡು ಬಾರಿ ಶೇಂಗಾ ಬಿತ್ತನೆ ಸಂದರ್ಭ ಕಾಯಿಯನ್ನು ಬಿಡಿಸಿ, ಶೇಂಗಾ ಬೀಜವನ್ನು ರೈತರಿಗೆ ಬಿತ್ತನೆಗಾಗಿ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.