ಬಹುತೇಕರು ಜೀವನ ನಿರ್ವಹಣೆಗಾಗಿ ಸಾಮಾನ್ಯವಾಗಿ ಒಂದು ಅಥವಾ ಎರಡು ಆದಾಯ ಮೂಲಗಳನ್ನು ನೆಚ್ಚಿಕೊಂಡಿರುತ್ತಾರೆ. ಆದರೆ ಕೊರೊನಾ ಸೃಷ್ಟಿಸಿದ ಬಿಕ್ಕಟ್ಟು, ಒಂದೆರಡು ಆದಾಯ ಮೂಲಗಳನ್ನು ಮಾತ್ರ ನಂಬಿ ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಒತ್ತಿ ಹೇಳಿದೆ. ಹೌದು, ಎಂಥದ್ದೇ ಸಂಕಷ್ಟದ ಕಾಲದಲ್ಲೂ ನಮ್ಮ ಆರ್ಥಿಕ ಸ್ಥಿತಿ ಹಳಿತಪ್ಪದಂತೆ ಎಚ್ಚರ ವಹಿಸಲು ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ ಕಂಡುಕೊಳ್ಳಬಹುದಾದ ಏಳು ಆದಾಯ ಮೂಲಗಳ ವಿವರ ಇಲ್ಲಿದೆ.
ಯಾವುವು ಇವು?
1. ಸಂಭಾವನೆ: ವ್ಯಕ್ತಿಯೊಬ್ಬ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಅದಕ್ಕೆ ಸಂಭಾವನೆ/ಸಂಬಳ ಪಡೆಯುತ್ತಾನೆ. ಉದಾಹರಣೆಗೆ, ವೈದ್ಯನೊಬ್ಬ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಸಂಭಾವನೆ ಪಡೆಯುತ್ತಾನೆ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಮಾಸಿಕ ಸಂಬಳ ಪಡೆಯುತ್ತಾನೆ, ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕ ವೇತನ ಪಡೆಯುತ್ತಾನೆ. ಬಹುಪಾಲು ಮಂದಿ ಇಂತಹ ಆದಾಯವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ.
2.ಸ್ವಂತ ವ್ಯವಹಾರದ ಆದಾಯ:ವ್ಯಕ್ತಿಯೊಬ್ಬ ನೌಕರಿಗೆ ಸೇರಿಲ್ಲ ಎಂದಾದಲ್ಲಿ ಸ್ವಂತ ಬಿಸಿನೆಸ್ ಮಾಡಿ ಆದಾಯ ಗಳಿಸುತ್ತಾನೆ. ಉದಾಹರಣೆಗೆ ದಿನಸಿ ಅಂಗಡಿಯ ಮಾಲೀಕ ಅಕ್ಕಿ ಮಾರುತ್ತಾನೆ. ಅದಕ್ಕೆ ನಿಗದಿ ಮಾಡಿರುವ ಬೆಲೆ ಕೊಟ್ಟು ನೀವು ಖರೀದಿಸುತ್ತೀರಿ. ಇದರಿಂದ ಆತ ಆದಾಯ ಗಳಿಸುತ್ತಾನೆ. ಈ ರೀತಿಯ ಗಳಿಕೆ ಸ್ವಂತ ವ್ಯವಹಾರದ ಆದಾಯವಾಗುತ್ತದೆ.
3.ಬಾಡಿಗೆ ಆದಾಯ:ನಿಮ್ಮ ಬಳಿ ಮನೆ, ಅಪಾರ್ಟ್‌ಮೆಂಟ್, ವಾಣಿಜ್ಯ ಮಳಿಗೆ, ಖಾಲಿ ನಿವೇಶನ ಇದ್ದಲ್ಲಿ ಅದನ್ನು ಬಾಡಿಗೆಗೆ ನೀಡುತ್ತೀರಿ. ಹೆಚ್ಚು ಪರಿಶ್ರಮವಿಲ್ಲದೆ ಪ್ರತಿ ತಿಂಗಳು ಅದರಿಂದ ನಿಮಗೆ ಬಾಡಿಗೆ ಆದಾಯ ಬರುತ್ತದೆ. ಆಸ್ತಿ ಖರೀದಿಸಿ ಬಾಡಿಗೆಗೆ ನೀಡುವುದು ಆದಾಯ ಹೆಚ್ಚಿಸಿಕೊಳ್ಳಲು ಇರುವ ಒಂದು ಉತ್ತಮ ಮಾರ್ಗ. ಏಕೆಂದರೆ, ವರ್ಷಗಳು ಕಳೆದಂತೆ ನಿವೇಶನದ ಬೆಲೆ ವೃದ್ಧಿಸುತ್ತದೆ.
4.ಹೂಡಿಕೆ ಮೇಲಿನ ಗಳಿಕೆ:ಹೂಡಿಕೆ ಮೇಲೆ ಗಳಿಸುವ ಲಾಭವನ್ನು ರಿಟರ್ನ್ಸ್ ಎನ್ನಬಹುದು. ಸಾಮಾನ್ಯವಾಗಿ ನಾವು ಉಳಿತಾಯ ಮಾಡುತ್ತೇವೆ. ಆದರೆ ಸರಿಯಾದ ಕಡೆ ಹೂಡಿಕೆ ಮಾಡುವುದಿಲ್ಲ. ಸರಿಯಾದ ಕಡೆ ಹೂಡಿಕೆ ಮಾಡಿದರೆ ಅದೇ ಒಂದು ಆದಾಯ ಮೂಲವಾಗುತ್ತದೆ. ಉದಾಹರಣೆಗೆ, ಗಳಿಸಿದ ಆದಾಯವನ್ನು ಎಫ್.ಡಿ. ರೂಪದಲ್ಲಿ ಇರಿಸಿದರೆ ಬಡ್ಡಿ ಬರುತ್ತದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿದರೆ ಲಾಭ ಸಿಗುತ್ತದೆ. ಈ ಸಾಧ್ಯತೆಗಳನ್ನು ಪರಿಗಣಿಸಿದಾಗ ಮಾತ್ರ ನಿಮ್ಮ ಹಣ ನಿಮಗಾಗಿ ದುಡಿಯುವಂತೆ ಮಾಡಲು ಸಾಧ್ಯ.
5.ರಾಯಧನ: ನೀವು ಹೊಸದೇನೋ ಒಂದನ್ನು ಅನ್ವೇಷಣೆ ಮಾಡಿ ಮಾನ್ಯತೆ ಪಡೆಯುತ್ತೀರಿ ಎಂದಿಟ್ಟುಕೊಳ್ಳೋಣ. ಆ ಹೊಸ ಯಂತ್ರವನ್ನು ಅಥವಾ ತಂತ್ರಾಂಶವನ್ನು ಬೇರೆಯವರು ಬಳಸಿಕೊಳ್ಳಬೇಕಾದರೆ ನಿಮಗೆ ರಾಯಧನ ನೀಡಬೇಕಾಗುತ್ತದೆ. ಉದಾಹರಣೆಗೆ ಕಂಪ್ಯೂಟರ್ ತಯಾರಕರು ಮೈಕ್ರೋಸಾಫ್ಟ್ ಕಂಪನಿಯ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸುತ್ತಾರೆ. ಅದಕ್ಕಾಗಿ ಅವರು ರಾಯಧನ ನೀಡುತ್ತಾರೆ.
6.ಹಕ್ಕುಸ್ವಾಮ್ಯ:ಉದಾಹರಣೆಗೆ ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ನೀವು ಒಳ್ಳೆಯ ಹೆಸರು ಮಾಡಿರುತ್ತೀರಿ. ಆ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪುಸ್ತಕವೊಂದನ್ನು ಬರೆಯುತ್ತೀರಿ. ಆ ಪುಸ್ತಕವನ್ನು ಪ್ರಕಾಶನ ಸಂಸ್ಥೆಯೊಂದು ಮುದ್ರಿಸಿ ಮಾರುಕಟ್ಟೆಗೆ ತರುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಪ್ರಕಾಶನ ಸಂಸ್ಥೆ ಹಕ್ಕುಸ್ವಾಮ್ಯವನ್ನು ಬಳಸಿಕೊಂಡಿರುತ್ತದೆ. ಅದಕ್ಕಾಗಿ ಆ ಪ್ರಕಾಶನ ಸಂಸ್ಥೆ ನಿಮಗೆ ಹಣ ನೀಡಬೇಕಾಗುತ್ತದೆ. ಹಲವು ಕ್ಷೇತ್ರಗಳಲ್ಲಿ ಈ ರೀತಿಯ ಬೇರೆ ಬೇರೆ ಆದಾಯದ ಸಾಧ್ಯತೆಗಳನ್ನು ಕಂಡುಕೊಳ್ಳಬಹುದಾಗಿದೆ.
7. ಪುನರಾವರ್ತನೆ (Replication):ಫ್ರಾಂಚೈಸಿ ಮಾಡೆಲ್‌ಗಳ ಬಗ್ಗೆ ನೀವು ಕೇಳಿರಬಹುದು. ಬಾಟಾ, ಕಾಫಿ ಡೇ, ಮೆಕ್ ಡೊನಾಲ್ಡ್ ಇವೆಲ್ಲಾ ಪುನರಾವರ್ತನೆ ಅಥವಾ ರೆಪ್ಲಿಕೇಷನ್‌ನ ಉದಾಹರಣೆಗಳು. ಅಮೆರಿಕದಲ್ಲಿ ಕೇವಲ 10 ಔಟ್‌ಲೆಟ್‌ಗಳೊಂದಿಗೆ ಆರಂಭವಾದ ಮೆಕ್ ಡೊನಾಲ್ಡ್ ಈಗ ಪ್ರಪಂಚದಾದ್ಯಂತ ಶಾಖೆಗಳನ್ನು ಹೊಂದಿದೆ. ಪ್ರತಿ ಬಾರಿ ನೀವು ಫ್ರೆಂಚ್ ಫ್ರೈಸ್, ಬರ್ಗರ್ ಖರೀದಿಸಿದಾಗಲೂ ಮೂರನೇ ವ್ಯಕ್ತಿ ಫ್ರಾಂಚೈಸಿ ನಡೆಸುತ್ತಿದ್ದರೂ ಮೆಕ್ ಡೊನಾಲ್ಡ್ ಕಂಪನಿಗೆ ಲಾಭದ ಒಂದಿಷ್ಟು ಭಾಗ ಸೇರುತ್ತದೆ.
(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.