ADVERTISEMENT

ಷೇರು ವಿಕ್ರಯದ ಅವಾಸ್ತವಿಕ ಗುರಿ ನಿಗದಿ ಬೇಡ: ಸ್ಥಾಯಿ ಸಮಿತಿ

ಅನ್ನಪೂರ್ಣ ಸಿಂಗ್
Published 26 ಮಾರ್ಚ್ 2022, 19:32 IST
Last Updated 26 ಮಾರ್ಚ್ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಜೆಟ್ ಕೊರತೆಗಳನ್ನು ಪರಿಹರಿಸಲು ಷೇರುವಿಕ್ರಯದ ಅವಾಸ್ತವಿಕ ಗುರಿಗಳನ್ನು ನಿಗದಿಪಡಿಸುವುದು ಸರ್ಕಾರದ ಹಿತದೃಷ್ಟಿಯಿಂದ ಸರಿಯಲ್ಲ. ಇದರಿಂದಾಗಿ ಸಾರ್ವಜನಿಕ ವಲಯದ ಉದ್ಯಮಗಳ ಷೇರುಗಳ ಮೌಲ್ಯ ಕುಸಿತಕ್ಕೆ ಕಾರಣವಾಗಬಹುದು ಎಂದು ಸಂಸದೀಯ ಸಮಿತಿಯು ಎಚ್ಚರಿಸಿದೆ.

ಷೇರು ವಿಕ್ರಯದ ಗುರಿ ತಲುಪುವುದು ಬಜೆಟ್‌ಗೆ ಮುಖ್ಯವಾಗಿದೆ. ಅದರ ಅಂದಾಜನ್ನು ತಗ್ಗಿಸುವುದರಿಂದ ವಿತ್ತೀಯ ಸಮತೋಲನದಲ್ಲಿ ವ್ಯತ್ಯಾಸಕ್ಕೆ ಕಾರಣ ಆಗಬಹುದು ಎಂದು ಸ್ಥಾಯಿ ಸಮಿತಿಯು ಲೋಕಸಭೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರುವಿಕ್ರಯದ ಮೂಲಕ ₹ 1.75 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಆ ಬಳಿಕ ಅದನ್ನು ₹ 78 ಸಾವಿರ ಕೋಟಿಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಆದಾಗ್ಯೂ ಈವರೆಗೆ ಸಂಗ್ರಹ ಆಗಿರುವುದು ₹ 12,434 ಕೋಟಿ ಮಾತ್ರ.

ADVERTISEMENT

ಕೇಂದ್ರ ಸರ್ಕಾರವು ಷೇರುವಿಕ್ರಯದ ಗುರಿ ತಲುಪಲು ಎಲ್‌ಐಸಿ ಐಪಿಒ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ, ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಮಾರುಕಟ್ಟೆಯಲ್ಲಿ ಅಸ್ಥಿರತೆ ಮೂಡಿದ್ದು, ಎಲ್‌ಐಸಿ ಐಪಿಒ ಅನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಲಾಗಿದೆ.

ಸಾರ್ವಜನಿಕ ಆಸ್ತಿಯನ್ನು ಯಾವ ರೀತಿ ನಿರ್ವಹಣೆ ಮಾಡಲಾಗಿದೆ ಎನ್ನುವ ಕುರಿತು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ವಾರ್ಷಿಕ ವರದಿ ಬಿಡುಗಡೆ ಮಾಡುವ ಅಗತ್ಯವನ್ನೂ ಸಮಿತಿಯು ಒತ್ತಿ ಹೇಳಿದೆ. ಮುಖ್ಯವಾಗಿ ಸಾರ್ವಜನಿಕ ಆಸ್ತಿಯ ಮೌಲ್ಯವನ್ನು ಹೆಚ್ಚಿಸಲಾಗಿದೆಯೇ ಅಥವಾ ತಗ್ಗಿಸಲಾಗಿದೆಯೇ ಎನ್ನುವ ಮಾಹಿತಿಯು ವರದಿಯಲ್ಲಿ ಇರುಬೇಕು ಎಂದು ಹೇಳಿದೆ.

ಮುಖ್ಯಾಂಶಗಳು

ಪೇರು ವಿಕ್ರಯದ ಪರಿಷ್ಕೃತ ಗುರಿಯೂ ಕಷ್ಟ

ಮುಂದಿನ ಹಣಕಾಸು ವರ್ಷಕ್ಕೆ ಎಲ್‌ಐಸಿ ಐಪಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.