ADVERTISEMENT

ಒಣಮೆಣಸಿನಕಾಯಿ: ಇಳುವರಿ ಕುಂಠಿತ, ಬೆಲೆ ಇಳಿಕೆ; ರೈತರಿಗೆ ಸಂಕಷ್ಟ

ಬಸವರಾಜ ಹವಾಲ್ದಾರ
Published 14 ಜನವರಿ 2024, 21:30 IST
Last Updated 14 ಜನವರಿ 2024, 21:30 IST
<div class="paragraphs"><p>ಬಾಗಲಕೋಟೆ ಜಿಲ್ಲೆಯ ಹಳ್ಳೂರಿನಲ್ಲಿ ಮೆಣಸಿನಕಾಯಿ ಸಂಸ್ಕರಣೆ ಮಾಡುತ್ತಿರುವ ಮಹಿಳೆಯರು</p></div>

ಬಾಗಲಕೋಟೆ ಜಿಲ್ಲೆಯ ಹಳ್ಳೂರಿನಲ್ಲಿ ಮೆಣಸಿನಕಾಯಿ ಸಂಸ್ಕರಣೆ ಮಾಡುತ್ತಿರುವ ಮಹಿಳೆಯರು

   

ಬಾಗಲಕೋಟೆ: ಬರದಿಂದ ಬಳಲುತ್ತಿರುವ ಜಿಲ್ಲೆಯ ರೈತರು, ಈಗ ಬಂದಿರುವ ಅಲ್ಪ ಸ್ವಲ್ಪ ಇಳುವರಿ ಪಡೆದಿರುವ ಮೆಣಸಿನಕಾಯಿ ಬೆಳೆಗೂ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಜೋಳ, ಕಡಲೆ, ಗೋಧಿ ಬೆಳೆದುಕೊ‌ಡಿದ್ದ ರೈತರು ಈಗ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಬೆಲೆ ಕುಸಿತದಿಂದಾಗಿ ಮೆಣಸಿನಕಾಯಿ ರೈತರ ಪಾಲಿಗೆ ಖಾರವಾಗಿ ತಳಮಳ ಹೆಚ್ಚಿಸಿದೆ.

ADVERTISEMENT

ಹಿಂದೆ ಜಿಲ್ಲೆಯಲ್ಲಿ ಮೆಣಸಿನ ಕಾಯಿಯನ್ನು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಈಗ 11 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮಳೆ ಕೊರತೆಯಿಂದಾಗಿ ನಿರೀಕ್ಷಿಸಿದಷ್ಟು ಇಳುವರಿ ಬಂದಿಲ್ಲ.

‘ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿಗಳೆರಡನ್ನೂ ಬೆಳೆದಿದ್ದೇವೆ. ಎಕರೆಗೆ ಬ್ಯಾಡಗಿ ಮೆಣಸಿನಕಾಯಿ ಮೂರು ಕ್ವಿಂಟಲ್ ಇಳುವರಿ ಬರುತ್ತಿತ್ತು. ಈ ಬಾರಿ
ಮಳೆಯಾಗದ್ದರಿಂದ ಒಂದು ಕ್ವಿಂಟಲ್‌ ಮಾತ್ರ ಬಂದಿದೆ. ಗುಂಟೂರು 8 ರಿಂದ 10 ಕ್ವಿಂಟಲ್ ಬೆಳೆಯುತ್ತಿತ್ತು. ಈಗ 3–4 ಕ್ವಿಂಟಲ್ ಬಂದಿದೆ' ಎಂದು ರೈತ ವಿರೂಪಾಕ್ಷಪ್ಪ ಹುದ್ದಾರ ಹೇಳಿದರು.

‘ಪ್ರತಿ ಕ್ವಿಂಟಲ್ ಗೆ ಬ್ಯಾಡಗಿ ಮೆಣಸಿನಕಾಯಿಗೆ ಕಳೆದ ವರ್ಷ
₹60 ರಿಂದ ₹65 ಸಾವಿರ ಬೆಲೆ ಸಿಕ್ಕಿತ್ತು. ಈ ಬಾರಿ ₹ 38 ರಿಂದ ₹40 ಸಾವಿರ ಇದೆ. ಗುಂಟೂರು ₹20 ರಿಂದ ₹22 ಸಾವಿರ ಕ್ವಿಂಟಲ್ ಇರುತ್ತಿದ್ದ ಬೆಲೆ ಈಗ ₹ 15 ಸಾವಿರ ಆಸುಪಾಸಿನಲ್ಲಿದೆ. ಪ್ರತಿ ಎಕರೆಗೆ ₹50 ರಿಂದ ₹60 ಸಾವಿರ ಖರ್ಚಾಗುತ್ತದೆ. ಬೆಲೆ ಇಲ್ಲದ್ದರಿಂದ ನಷ್ಟವಾಗುತ್ತಿದೆ’ ಎಂದು ಹಳ್ಳೂರಿನ ರೈತ ಯಂಕಣ್ಣ ಮೇಟಿ ಅಳಲು ತೋಡಿಕೊಂಡರು.

ಉತ್ತಮ ಮಳೆಯಾಗುತ್ತಿದ್ದರಿಂದ ಹಿಂದಿನ ವರ್ಷ ನೀರಿನ ಕೊರತೆಯಾಗುತ್ತಿರಲಿಲ್ಲ. ಈ ವರ್ಷ ಮಳೆ ಸರಿಯಾಗಿ ಆಗದೇ ಕೆಲವು ರೈತರು ಟ್ಯಾಂಕರ್ ಮೂಲಕ ನೀರು ಹಾಕಿ ಬೆಳೆ ಉಳಿಸಿಕೊಳ್ಳಲು ಹೆಣಗಾಡಿದ್ದಾರೆ. ಇದರಿಂದ ಖರ್ಚು ಹೆಚ್ಚಿದೆ.  

‘ಕಳೆದ ಎರಡು ವರ್ಷ ಉತ್ತಮ ಬೆಲೆ ದೊರೆತಿತ್ತು. ಈ ವರ್ಷ ಮತ್ತಷ್ಟು ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಇಳುವರಿ ಕಡಿಮೆಯಾಗಿದೆ. ಉತ್ತಮ ಬೆಲೆ ಸಿಗುವ ನಿರೀಕ್ಷೆ ಹುಸಿಯಾಗಿದೆ’ ಎಂದು ರೈತ ಶಿವಾನಂದ ಹಡಗಲಿ ದೂರಿದರು.

‘ಬಾಗಲಕೋಟೆ ಜಿಲ್ಲೆಯಲ್ಲಿ ಮೆಣಸಿನಕಾಯಿಗೆ ಮಾರುಕಟ್ಟೆಯಿಲ್ಲ. ಹುಬ್ಬಳ್ಳಿ ಅಥವಾ ಬ್ಯಾಡಗಿ ಮಾರುಕಟ್ಟೆಗೆ ತೆಗೆದು ಕೊಂಡು ಹೋಗಬೇಕು. ಅದಕ್ಕೆ ಸಾರಿಗೆ ಖರ್ಚು ಹೆಚ್ಚುವರಿಯಾಗುತ್ತದೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.