ಬೆಂಗಳೂರು: ಸುಸ್ಥಿರ ಶಕ್ತಿಯ ಪ್ರವರ್ತಕ ಸೆಲ್ಕೊ ಇಂಡಿಯಾದಲ್ಲಿ ಬಂಡವಾಳ ಹೂಡಲು ಡೂಯೆನ್ ಸಂಸ್ಥೆ ನಿರ್ಧರಿಸಿದೆ.
ಬಡವರ ಜೀವನಮಟ್ಟ ಸುಧಾರಿಸಲು ಸುಸ್ಥಿರ ಇಂಧನದ ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಸೆಲ್ಕೊದ ಪ್ರಯತ್ನದಲ್ಲಿ ಕೈಜೋಡಿಸುವ ಉದ್ದೇಶಕ್ಕೆ ಡೂಯೆನ್ ಈ ನಿರ್ಧಾರಕ್ಕೆ ಬಂದಿದೆ.
‘ಈ ಬಂಡವಾಳ ಹೂಡಿಕೆಯಿಂದಾಗಿ ಬಡತನ ನಿರ್ಮೂಲನೆಗೆ ಹೊಸ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಿದೆ. ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯವನ್ನು ಬಡವರೂ ಸಮಾನವಾಗಿ ಪಡೆದುಕೊಳ್ಳಲು ಅನುವುಗೊಳಿಸುವ ಅವಕಾಶವನ್ನು ಈ ಪಾಲುದಾರಿಕೆ ನೀಡಿದೆ. ಸೌರಚಾಲಿತ ಉಪಕರಣಗಳ ಮೂಲಕ ಜನರ ಜೀವನೋಪಾಯ, ಶಿಕ್ಷಣ, ಕೃಷಿ ಮತ್ತು ಆರೋಗ್ಯವನ್ನು ಬಲಪಡಿಸಲು ಅಗತ್ಯವಾದ ಕೈಗೆಟುಕುವ ಸಾಲ ಸೌಲಭ್ಯ ಒದಗಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಸೆಲ್ಕೊ ಇಂಡಿಯಾದ ಅಧ್ಯಕ್ಷ ಡಾ. ಹರೀಶ್ ಹಂದೆ ಅವರು ಹೇಳಿದ್ದಾರೆ.
‘ಇಂಧನ ಬಳಕೆಯಲ್ಲಿ ತ್ವರಿತವಾದ ಬದಲಾವಣೆ ತಂದು ಸಮಾಜದ ಎಲ್ಲಾ ಜನರಿಗೂ ಸಿಗುವಂತೆ ಮಾಡುವುದು ನಮ್ಮ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಸೆಲ್ಕೊ ಸಂಸ್ಥೆಯು ಈ ದಿಕ್ಕಿನಲ್ಲಿಯೇ ಕಾರ್ಯಪ್ರವೃತ್ತವಾಗಿದೆ. ಎರಡೂ ಸಂಸ್ಥೆಗಳ ಸಹಭಾಗಿತ್ವದಿಂದ ಗ್ರಾಮೀಣ ಪ್ರದೇಶದ ಬಡ ಜನರನ್ನು ತಲುಪಲು ನೆರವಾಗಲಿದೆ’ ಎಂದು ಡೂಯೆನ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ಮಿಶೆಲ್ ಡಿ ರಿಜ್ ಹೇಳಿದ್ದಾರೆ. ಸಾಮಾಜಿಕ ಮತ್ತು ಸುಸ್ಥಿರ ಪರಿಹಾರಗಳಿಗಾಗಿ ಉದ್ಯಮ ಪ್ರಾರಂಭಿಸುವ ಸಂಸ್ಥೆಗಳಿಗೆ ಡೂಯೆನ್, 20 ವರ್ಷಗಳಿಂದ ಬಂಡವಾಳ ಹೂಡಿಕೆ ಮಾಡುತ್ತ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.