ADVERTISEMENT

ಚಿನ್ನದ ಬೇಡಿಕೆ ಶೇ 18ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:36 IST
Last Updated 30 ಅಕ್ಟೋಬರ್ 2024, 15:36 IST
   

ಮುಂಬೈ: ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಕಡಿತಗೊಳಿಸಿದ್ದರಿಂದ ಭಾರತದಲ್ಲಿ ಚಿನ್ನದ ಬೇಡಿಕೆಯು ಹೆಚ್ಚಳವಾಗಿದೆ. ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ಬೇಡಿಕೆಯು 248.3 ಟನ್‌ ಆಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ತಿಳಿಸಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು 210.2 ಟನ್‌ ಆಗಿತ್ತು. ಇದಕ್ಕೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಳವಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ ದೇಶದ ಚಿನ್ನದ ಬೇಡಿಕೆಯು 700ರಿಂದ 750 ಟನ್‌ ಆಗುವ ನಿರೀಕ್ಷೆಯಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಪ್ರಮಾಣ ತಗ್ಗಲಿದೆ ಎಂದು ವಿವರಿಸಿದೆ.

ADVERTISEMENT

2023ರಲ್ಲಿ ಭಾರತದ ಚಿನ್ನದ ಬೇಡಿಕೆಯು 761 ಟನ್‌ ಆಗಿತ್ತು.

ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಚಿನ್ನದ ಒಟ್ಟು ಬೇಡಿಕೆ ಮೌಲ್ಯವು ₹1.65 ಲಕ್ಷ ಕೋಟಿ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ₹1.07 ಲಕ್ಷ ಕೋಟಿ ಆಗಿತ್ತು.

‘ಕೇಂದ್ರ ಸರ್ಕಾರವು ಜುಲೈನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿತು. ಇದೇ ಬೇಡಿಕೆ ಹೆಚ್ಚಳಕ್ಕೆ ಕಾರಣ. 2015ರ ಬಳಿಕ ಈ ತ್ರೈಮಾಸಿಕದಲ್ಲಿ ಚಿನ್ನಾಭರಣ ಬೇಡಿಕೆಯು ಹೆಚ್ಚಳವಾಗಿದೆ’ ಎಂದು ಭಾರತದ ಡಬ್ಲ್ಯುಜಿಸಿ ಪ್ರಾದೇಶಿಕ ಸಿಇಒ ಸಚಿನ್‌ ಜೈನ್ ತಿಳಿಸಿದ್ದಾರೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಆರ್‌ಬಿಐ 13 ಟನ್‌ ಚಿನ್ನ ಖರೀದಿಸಿದೆ. ಮೊದಲ ಹಾಗೂ ಎರಡನೇ ತ್ರೈಮಾಸಿಕದಲ್ಲಿ ತಲಾ 18 ಟನ್‌ ಖರೀದಿಸಿತ್ತು.

Cut-off box - ‌360 ಟನ್‌ ಆಮದು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು 360.2 ಟನ್‌ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 193 ಟನ್‌ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಹೋಲಿಸಿದರೆ ಆಮದು ಪ್ರಮಾಣದಲ್ಲಿ ಶೇ 87ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.