ADVERTISEMENT

ಇವಿ ಬಳಕೆಯಲ್ಲಿ ಗ್ರಾಹಕ ಸ್ನೇಹಿ ವ್ಯವಸ್ಥೆ: ಮೊದಲ ಇ–ಹಬ್‌ ಕಾರ್ಯಾರಂಭ

ಎಲೆಕ್ಟ್ರಿಕ್‌ ವಾಹನ ಬಳಕೆಯಲ್ಲಿ ಗ್ರಾಹಕ ಸ್ನೇಹಿ ವ್ಯವಸ್ಥೆ ಪರಿಚಯಿಸಿದ ಎಂ.ಜಿ. ಮೋಟರ್ಸ್‌

ಬಾಲಕೃಷ್ಣ ಪಿ.ಎಚ್‌
Published 7 ಆಗಸ್ಟ್ 2024, 23:50 IST
Last Updated 7 ಆಗಸ್ಟ್ 2024, 23:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳನ್ನು (ಇವಿ) ಇನ್ನಷ್ಟು ಗ್ರಾಹಕ ಸ್ನೇಹಿ ಮಾಡಲು ಎಂ.ಜಿ. ಮೋಟಾರ್ ಇಂಡಿಯಾವು ‘ಡ್ರೈವ್‌.ಭಾರತ್‌’ ಮೂಲಕ ಬಹು ಕಂಪನಿಗಳ ಮೊದಲ ಇವಿ ಇಕೊಸಿಸ್ಟಂ ಆರಂಭಿಸಿದೆ. ಸುಲಭವಾಗಿ ಚಾರ್ಚಿಂಗ್‌ ಪಾಯಿಂಟ್‌ ಪತ್ತೆ ಹಚ್ಚಲು, ಕಾಯ್ದಿರಿಸಲು ಮತ್ತು ಪಾವತಿ ಮಾಡಲು ಅನುಕೂಲವಾಗುವಂತಹ ‘ಇ–ಹಬ್‌’ ಕಾರ್ಯಾರಂಭ ಮಾಡಿದೆ.

ಇಲ್ಲಿನ ಭಾರತ್‌ ಮಂಟಪಮ್‌ನಲ್ಲಿ ವಿವಿಧ ಇವಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ನಡೆದ ಸಮಾವೇಶದಲ್ಲಿ, ಜೆಎಸ್‌ಡಬ್ಲ್ಯು ಎಂಜಿ ಮೋಟಾರ್‌ ಇಂಡಿಯಾದ ಮುಖ್ಯ ಅಭಿವೃದ್ಧಿ ಅಧಿಕಾರಿ ಗೌರವ್‌ ಗುಪ್ತ ಅವರು ‘ಇ–ಹಬ್‌’ ವ್ಯವಸ್ಥೆ ಚಾಲನೆಗೆ ಬಂದಿದೆ ಎಂದು ಘೋಷಿಸಿದರು.

ADVERTISEMENT

‘ಇ–ಹಬ್‌’ ಜಾಲಕ್ಕೆ ಅದಾನಿ ಟೋಟಲ್ ಎನರ್ಜೀಸ್ ಲಿಮಿಟೆಡ್ (ಎಟಿಇಎಲ್‌), ಬಿಪಿಸಿಎಲ್‌, ಚಾರ್ಜ್‌ಝೋನ್‌, ಗ್ಲಿಡ, ಎಚ್‌ಪಿಸಿಎಲ್‌, ಜಿಯೊ–ಬಿಪಿ, ಶೆಲ್‌, ಸ್ಟ್ಯಾಟಿಕ್‌, ಜಿಯೊನ್‌ ಸಹಿತ ಪ್ರಮುಖ ಪೂರೈಕೆದಾರ ಕಂಪನಿಗಳನ್ನು ಪಾಲುದಾರರನ್ನಾಗಿ ಮಾಡುವ ಮೂಲಕ ದೇಶದಾದ್ಯಂತ ಈ ಜಾಲವನ್ನು (ನೆಟ್‌ವರ್ಕ್‌) ವಿಸ್ತರಿಸುವ ಗುರಿಯನ್ನು ಎಂ.ಜಿ. ಮೋಟಾರ್ಸ್‌ ಇಂಡಿಯಾ ಹೊಂದಿದೆ.

ಇವಿ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಟಿಇಆರ್‌ಐ ಮತ್ತು ಲೋಹಮ್‌ ಸಹಭಾಗಿತ್ವದಲ್ಲಿ ‘ಪ್ರಾಜೆಕ್ಟ್‌ ರಿವೈವ್‌’ ರೂಪಿಸಲಾಗಿದೆ. ಶಾಲೆ, ಸಮುದಾಯ ಕೇಂದ್ರಗಳಲ್ಲಿ ವಾಹನಗಳ ಬ್ಯಾಟರಿಗಳನ್ನು ಮರುಬಳಕೆ ಮಾಡುವ ಮೂಲಕ ಬ್ಯಾಟರಿಗಳ ಜೀವಿತಾವಧಿ ವಿಸ್ತರಿಸುವ, ತ್ಯಾಜ್ಯ ಕಡಿಮೆ ಮಾಡುವ ಯೋಜನೆ ಇದರಲ್ಲಿದೆ.

ಎಲೆಕ್ಟ್ರಿಕ್ ಕಾರುಗಳಿಗಾಗಿ ಮೀಸಲಾದ ಭಾರತದ ಮೊದಲ ಇವಿ ಶಿಕ್ಷಣ ಮತ್ತು ಜ್ಞಾನ ವೇದಿಕೆ ‘ಇವಿಪಿಡಿಯಾ’ಕ್ಕೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಬಳಕೆದಾರರ ಎಲ್ಲ ಪ್ರಶ್ನೆಗಳಿಗೆ ‘ಇವಿಪಿಡಿಯಾ’ ಆನ್‌ಲೈನ್ ವೇದಿಕೆ ಉತ್ತರ ನೀಡಲಿದೆ.

ಎಂ.ಜಿ. ಮೋಟಾರ್ ಇಂಡಿಯಾ ಮತ್ತು ಜಿಯೊ ಕಂಪನಿಗಳ ಸಹಭಾಗಿತ್ವದಲ್ಲಿ ಎಂಜಿ–ಜಿಯೊ ಇನ್ನೊವೇಟಿವ್‌ ಕನೆಕ್ಟಿವಿಟಿ ಪ್ಯ್ಲಾಟ್‌ಫಾರ್ಮ್ (ಎಂಜಿ–ಜಿಯೊ ಐಸಿಪಿ) ಆರಂಭಿಸಲಾಗಿದೆ. ಇದು ಎಲೆಕ್ಟ್ರಿಕ್‌ ವಾಹನಗಳನ್ನು ಕ್ರೀಡೆ, ಮನರಂಜನೆಗಳಿಗೆ ಪರಿಚಯಿಸಲಿದೆ. ಕಲಿಕೆಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದ್ದು, ಕನ್ನಡ ಸೇರಿದಂತೆ ದೇಶದ ಆರು ಭಾಷೆಗಳಲ್ಲಿ ಧ್ವನಿ ಆಜ್ಞೆಗಳನ್ನು ನೀಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಎಂ.ಜಿ. ಮೋಟಾರ್‌ ವತಿಯಿಂದ ಎಲೆಕ್ಟ್ರಿಕ್ ವಾಹನ (ಇವಿ) ಆವಿಷ್ಕಾರಗಳ ಸರಣಿಯ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇವಿ ಇಕೊಸಿಸ್ಟಂಗೆ ಸಂಬಂಧಿಸಿದ ತಂತ್ರಜ್ಞಾನಗಳ ಪ್ರದರ್ಶನಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.