ನವದೆಹಲಿ: ಕಳೆದ ವರ್ಷ ದೇಶದ ಕೃಷಿ ವಲಯದ ಬೆಳವಣಿಗೆಯು ಶೇ 1.4ರಷ್ಟು ಕುಗ್ಗಿತ್ತು. ಪ್ರಸಕ್ತ ವರ್ಷ ಎನ್‌ನಿನೊ ಪರಿಣಾಮ ತಗ್ಗಿದ್ದು, ವಾಡಿಕೆ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯುವ ನಿರೀಕ್ಷೆಯಿದೆ. ಹಾಗಾಗಿ, ಈ ವರ್ಷ ಕೃಷಿ ವಲಯವು ಶೇ 3.7ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಫಿಕ್ಕಿ) ಅಂದಾಜಿಸಿದೆ.
2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6.8ರಷ್ಟು ಹಾಗೂ ಎರಡನೇ ತ್ರೈಮಾಸಿಕದಲ್ಲಿ ಶೇ 7.2ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ. ಪೂರ್ಣ ವರ್ಷದಲ್ಲಿ ಶೇ 7ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಗುರುವಾರ ಬಿಡುಗಡೆಯಾಗಿರುವ ಆರ್ಥಿಕ ಮುನ್ನೋಟದ ವರದಿ ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೇವಾ ವಲಯವು ಶೇ 7.4ರಷ್ಟು ಹಾಗೂ ಕೈಗಾರಿಕಾ ವಲಯವು ಶೇ 6.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ.
ಪ್ರಮುಖ ಕೈಗಾರಿಕೆಗಳು, ಬ್ಯಾಕಿಂಗ್ ಮತ್ತು ಹಣಕಾಸು ವಲಯದ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಆಧಾರದ ಮೇಲೆ ಈ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ.
2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 8.2ರಷ್ಟು ದಾಖಲಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿವೆ.
ರೆಪೊ ದರ ಶೇ 0.50ರಷ್ಟು ಕಡಿತ?
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್‌ನ ರೆಪೊ ದರ ಶೇ 6.5ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಆರ್‌ಬಿಐ ರೆಪೊ ದರದಲ್ಲಿ ಶೇ 0.50ರಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅರ್ಥಶಾಸ್ತ್ರಜ್ಞರು ಹೇಳಿರುವುದಾಗಿ ವರದಿ ತಿಳಿಸಿದೆ. ಹಣದುಬ್ಬರದ ಏರಿಕೆ ಮೇಲೆ ಆರ್‌ಬಿಐ ನಿಗಾವಹಿಸಿದೆ. ನಿಗದಿತ ಮಿತಿಗೆ ತಲುಪಿದರೆ ರೆಪೊ ದರ ಇಳಿಸಲು ಮುಂದಾಗಲಿದೆ. ಹಾಗಾಗಿ ಈ ಆರ್ಥಿಕ ವರ್ಷದ ದ್ವಿತೀಯಾರ್ಧದ ಬಳಿಕವಷ್ಟೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಹಣದುಬ್ಬರ ಶೇ 5ರಷ್ಟು ದಾಖಲು
'ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಶೇ 4.4ರಿಂದ ಶೇ 5ರಷ್ಟು ದಾಖಲಾಗಲಿದೆ ಎಂದು ಫಿಕ್ಕಿ ವರದಿ ಹೇಳಿದೆ. ಹಣದುಬ್ಬರದ ಮಧ್ಯಮಾವಧಿ ಪ್ರಮಾಣವನ್ನು ಶೇ 4.5ರಷ್ಟಕ್ಕೆ ನಿಗದಿಪಡಿಸಿದೆ. ಹಣದುಬ್ಬರದ ಏರಿಕೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪಾಲು ಹೆಚ್ಚಿರಲಿದೆ. ಎರಡನೇ ತ್ರೈಮಾಸಿಕದ ವೇಳೆಗೆ ಮುಂಗಾರು ಅವಧಿಯಲ್ಲಿ ಬಿತ್ತನೆಯಾಗಿರುವ ಆಹಾರ ಪದಾರ್ಥಗಳು ಮಾರುಕಟ್ಟೆಗೆ ಪೂರೈಕೆಯಾಗಲಿವೆ. ಆಗ ಬೇಳೆಕಾಳು ಹಣ್ಣುಗಳು ಹಾಲಿನ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.