ADVERTISEMENT

ದೇಶದ ಆರ್ಥಿಕ ಸಾಧನೆ ತೃ‍ಪ್ತಿಕರ: ಹಣಕಾಸು ಸಚಿವಾಲಯ

ಪಿಟಿಐ
Published 28 ಅಕ್ಟೋಬರ್ 2024, 15:44 IST
Last Updated 28 ಅಕ್ಟೋಬರ್ 2024, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌–ಸೆಪ್ಟೆಂಬರ್) ದೇಶದ ಆರ್ಥಿಕ ಸಾಧನೆ ತೃ‍ಪ್ತಿಕರವಾಗಿದೆ ಎಂದು ಹಣಕಾಸು ಸಚಿವಾಲಯದ ವರದಿ ಸೋಮವಾರ ತಿಳಿಸಿದೆ.

ಭಾರತದ ಆರ್ಥಿಕತೆಯ ಮುನ್ನೋಟವು ಉತ್ತಮವಾಗಿದೆ. ಕೃಷಿ ವಲಯದ ಸಕಾರಾತ್ಮಕತೆ, ಹಬ್ಬದ ಋತುವಿನಿಂದ ಹೆಚ್ಚಿದ ಬೇಡಿಕೆ ಮತ್ತು ಸರ್ಕಾರದ ವೆಚ್ಚದಲ್ಲಿನ ಹೆಚ್ಚಳವು ದೇಶದಲ್ಲಿ ಹೂಡಿಕೆ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ. 

ಪಶ್ಚಿಮ ಏಷ್ಯಾ ಬಿಕ್ಕಟ್ಟು, ಪ್ರಮುಖ ರಾಷ್ಟ್ರಗಳ ವ್ಯಾಪಾರ ನೀತಿ ಬಗ್ಗೆ ಅನಿಶ್ಚಿತತೆಗಳು ಮತ್ತು ಜಾಗತಿಕ ಅಂಶಗಳಿಂದ ಅಪಾಯ ಉಂಟಾಗಬಹುದು ಎಂದು ಹೇಳಿದೆ.

ADVERTISEMENT

ಹೆಚ್ಚಿನ ಮಳೆ ಮತ್ತು ಜನರು ಹೊಸ ಖರೀದಿಗಳಿಂದ ದೂರವಿರಲು ಒಲವು ತೋರುತ್ತಿರುವುದರಿಂದ ನಗರ ಬೇಡಿಕೆಯು ಇಳಿಕೆಯಾಗಿದೆ. ಎರಡು ತಿಂಗಳು ಇಳಿಕೆ ಕಂಡಿದ್ದ ಚಿಲ್ಲರೆ ಹಣದುಬ್ಬರವು ತರಕಾರಿಗಳ ಬೆಲೆ ಏರಿಕೆಯಿಂದ ಸೆಪ್ಟೆಂಬರ್‌ನಲ್ಲಿ ಏರಿತು. ಆದರೂ, ಕೆಲವು ತರಕಾರಿಗಳ ಬೆಲೆಯ ಏರಿಕೆಯನ್ನು ಹೊರತುಪಡಿಸಿದರೆ, ಹಣದುಬ್ಬರವು ನಿಯಂತ್ರಣದಲ್ಲಿದೆ ಎಂದು ಹೇಳಿದೆ.

ವಿದೇಶಿ ಬಂಡವಾಳ ಹೂಡಿಕೆದಾರರಲ್ಲಿ ಭಾರತದೆಡೆಗಿನ ಮನೋಭಾವವು ಸಕಾರಾತ್ಮಕವಾಗಿದೆ. ಈ ಸಕಾರಾತ್ಮಕ ಭಾವನೆಗಳನ್ನು ದೇಶದಲ್ಲಿ ಬಂಡವಾಳ ಹೂಡಿಕೆಗಳಾಗಿ ಪರಿವರ್ತಿಸಲು, ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವುದು ಅಗತ್ಯ. ಆದರೂ, ವಿದೇಶಿ ಹೂಡಿಕೆದಾರರು ಕಳೆದ ತಿಂಗಳು ದೇಶದ ಈಕ್ವಿಟಿಗಳಿಂದ ₹85,790 ಕೋಟಿ ವಾಪಸ್‌ ತೆಗೆದುಕೊಂಡಿದ್ದಾರೆ.

ಸೆಪ್ಟೆಂಬರ್ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹58.84 ಲಕ್ಷ ಕೋಟಿ (700 ಶತಕೋಟಿ ಡಾಲರ್‌) ಮೀರಿದೆ. ಇದು 700 ಶತಕೋಟಿ ಡಾಲರ್‌ಗೂ ಹೆಚ್ಚಿನ ಮೀಸಲು ಹೊಂದಿರುವ ಅಗ್ರ ನಾಲ್ಕು ದೇಶಗಳಲ್ಲಿ ಭಾರತವನ್ನು ಒಂದಾಗಿಸಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಮತ್ತು ನೌಕ್ರಿ ಡಾಟ್‌ ಕಾಂ ಉದ್ಯೋಗ ಸೃಷ್ಟಿಯಲ್ಲಿ ಏರಿಕೆಯನ್ನು ತೋರಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಪ್ರಗತಿ ಶೇ 6.5ರಿಂದ ಶೇ 7ರ ನಡುವೆ ಬೆಳೆಯುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.