ನವದೆಹಲಿ: ಪ್ರಪಂಚದ ಮೂರನೇ ಒಂದರಷ್ಟು ಆರ್ಥಿಕತೆ 2023ರಲ್ಲಿ ಹಿಂಜರಿತ ಅನುಭವಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಮ್‌ಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ಚೀನಾದಲ್ಲಿ ಅರ್ಥಿಕತೆ ಮಂದಗತಿಯಲ್ಲಿ ಸಾಗಲಿದ್ದು, 2023ರ ಕಠಿಣ ವರ್ಷವಾಗಲಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾ–ಉಕ್ರೇನ್ ಯುದ್ಧ, ಬೆಲೆ ಏರಿಕೆ, ಬಡ್ಡಿದರ ಹೆಚ್ಚಳ ಹಾಗೂ ಕೋವಿಡ್ ಪ್ರಕರಣಗಳ ಏರಿಕೆ ಮುಂತಾದವುಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ನುಡಿದಿದ್ದಾರೆ.
‘ಪ್ರಪಂಚದ ಮೂರನೇ ಒಂದರಷ್ಟು ಆರ್ಥಿಕತೆಗಳು 2023ರಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ. ಆರ್ಥಿಕ ಹಿಂಜರಿತದ ಭಯ ಇಲ್ಲದ ದೇಶಗಳೂ ಕೂಡ, ಹಿಂಜರಿತದ ಪರಿಣಾಮ ಎದುರಿಸಲಿದೆ‘ ಎಂದು ಅವರು ಹೇಳಿದ್ದಾರೆ.
ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಳು ಐರೋಪ್ಯ ಒಕ್ಕೂಟಕ್ಕೆ ಅಸಾಧ್ಯ ಎಂದಿರುವ ಅವರು, ಅಮೆರಿಕ ಹಿಂಜರಿತದ ಅಂಚಿನಲ್ಲಿದೆ. ಚೀನಾಗೆ 2023 ತ್ರಾಸದಾಯಕವಾಗಿರಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
‘ಮುಂದಿನ ಎರಡು ತಿಂಗಳು ಚೀನಾಗೆ ಕಠಿಣವಾಗಿರಲಿದೆ. ಇದರಿಂದಾಗಿ ಚೀನಾದ ಬೆಳವಣಿಗೆ ಋಣಾತ್ಮಕವಾಗಿರಲಿದೆ. ಈ ಪ್ರದೇಶದ ಆರ್ಥಿಕತೆಗ ಹಾಗೂ ಜಾಗತಿಕ ಆರ್ಥಿಕತೆ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.