ADVERTISEMENT

ಆರ್ಥಿಕ ತಜ್ಞರ ರಾಜೀನಾಮೆ ಪರ್ವ

ಕೇಂದ್ರ ಸರ್ಕಾರ ಜತೆಗಿನ ಸಂಘರ್ಷದ ಕಾರಣ

ಪಿಟಿಐ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
   

ಮುಂಬೈ:ಆರ್ಥಿಕ ನೀತಿ ರೂಪಿಸುವ ಪ್ರಮುಖ ಹುದ್ದೆಗಳಲ್ಲಿದ್ದ ಆರ್ಥಿಕ ತಜ್ಞರು ಅವಧಿಗಿಂತಲೂ ಮೊದಲೇ ರಾಜೀನಾಮೆ ನೀಡುವ ಸರಣಿ ಮುಂದುವರಿದಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಒಳಗಾಗಿಯೇ ವಿರಲ್‌ ಆಚಾರ್ಯ ಅವರ ಅಚ್ಚರಿಯ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ.

ಸರ್ಕಾರದ ಜತೆಗಿನ ಸಂಘರ್ಷದಿಂದ ಮೋದಿ ನೇತೃತ್ವದ ಸರ್ಕಾರದ ಮೊದಲ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಹಲವರು ರಾಜೀನಾಮೆ ನೀಡಿದ್ದಾರೆ.

ADVERTISEMENT

ಡೆಪ್ಯುಟಿ ಗವರ್ನರ್‌ ಆಗಿದ್ದ ರಾಕೇಶ್‌ ಮೋಹನ್‌ ಅವರು ತಮ್ಮ ಅಧಿಕಾರ ಮುಗಿಯುವುದಕ್ಕೂ ಮೊದಲೇ 2009ರ ಮೇನಲ್ಲಿ ರಾಜೀನಾಮೆ ನೀಡಿದ್ದರು.

ರಘುರಾಂ ರಾಜನ್‌ :2013 ಸೆ. 4–2016ರ ಸೆ. 4

ರಘುರಾಂ ರಾಜನ್‌ ಅವರು ಮೂರು ವರ್ಷಗಳ ಅವಧಿ ಮುಕ್ತಾಯಗೊಳಿಸಿ, ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದ್ದರು. ಆದರೆ, ಬಡ್ಡಿದರ ಕಡಿತದ ವಿಷಯವಾಗಿ ಸರ್ಕಾರದೊಂದಿಗೆ ಬಿನ್ನಾಭಿಪ್ರಾಯ ಮೂಡಿದ್ದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಅವಧಿಗೆ ಅವರನ್ನು ಮುಂದುವರಿಸಲು ಮನಸ್ಸು ಮಾಡಲಿಲ್ಲ.

ಉರ್ಜಿತ್‌ ಪಟೇಲ್‌ :2016ರ ಸೆ. 4 – 2018ರ ಡಿ. 10

ಮಿತಭಾಷಿ ಎಂದೇ ಪ್ರಸಿದ್ಧಿ ಪಡೆದಿದ್ದ ಉರ್ಜಿತ್ ಪಟೇಲ್‌ ಅವರನ್ನು ರಾಜನ್‌ ನಂತರ ಮೂರು ವರ್ಷಗಳ ಅವಧಿಗೆ ಗವರ್ನರ್‌ ಆಗಿ ನೇಮಿಸಲಾಯಿತು. ಆದರೆ, ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ವಿಷಯದಲ್ಲಿ ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಅಧಿಕಾರಾವಧಿ ಮುಗಿಯಲು 9 ತಿಂಗಳು ಬಾಕಿ ಇರುವಂತೆಯೇ ರಾಜೀನಾಮೆ ನೀಡಿದರು. 1990ರ ನಂತರ ವೈಯಕ್ತಿಕ ಕಾರಣ ನೀಡಿ ಗವರ್ನರ್‌ ಹುದ್ದೆ ತೊರೆದ ಮೊದಲ ವ್ಯಕ್ತಿ ಇವರಾಗಿದ್ದಾರೆ.

ಅರವಿಂದ ಪನಗರಿಯಾ : 2015 ಜ.–2017 ಆ.

ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ ಪನಗರಿಯಾ ಅವರು ಸಹ ಎರಡೂವರೆ ವರ್ಷಗಳಿಗೇ ರಾಜೀನಾಮೆ ನೀಡಿದರು. ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ರಜೆ ವಿಸ್ತರಣೆ ಆಗಿರದ ಕಾರಣಕ್ಕೆ ಉಪಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣ ನೀಡಿದರು.

ಅರವಿಂದ ಸುಬ್ರಮಣಿಯನ್ :2014 ಅ. 16–2018 ಜೂ. 20

ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‌ ಅವರ ಅಧಿಕಾರಾವಧಿ 2019ರ ಮೇವರೆಗೂ ಇತ್ತು. ಆದರೆ ವೈಯಕ್ತಿಕ ಕಾರಣ ನೀಡಿ 2018ರ ಜೂನ್‌ನಲ್ಲಿಯೇ ರಾಜೀನಾಮೆ ನೀಡಿದರು.

ಸುರ್ಜಿತ್‌ ಭಲ್ಲಾ

ಆರ್ಥಿಕ ತಜ್ಞ, ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರಾಗಿದ್ದ ಇವರು 2018ರ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.