ಮುಂಬೈ: ಬಹುಕೋಟಿ ಪಿಎಂಸಿ ಬ್ಯಾಂಕ್ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಶಾಸಕರಿಗೆ ಸೇರಿದ ಕಂಪನಿಯೊಂದರ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಬಹುಜನ್ ವಿಕಾಸ್ ಅಗಾಡಿ (ಬಿವಿಎ) ಪಕ್ಷದ ಮುಖಂಡ ಮತ್ತು ಶಾಸಕ ಹಿತೇಂದ್ರ ಠಾಕೂರ್ ಮತ್ತು ಅವರ ಸಹಚರರಿಗೆ ಸೇರಿದ ವಿವಾ ಗ್ರೂಪ್‌ನ ಐದು ಮನೆ ಮತ್ತು ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಂಪನಿಗೆ ಸಂಬಂಧಿಸಿದ ಫಾಲ್ಗಾರ್ ಜಿಲ್ಲೆಯ ವಸಾಯಿ–ವಿರಾರ್ ಪ್ರದೇಶ ಹಾಗೂ ಮುಂಬೈನ ಅಂಧೇರಿ, ಜುಹು ಮತ್ತು ಚೆಂಬೂರು ಉಪನಗರದಲ್ಲಿರುವ ಹಣಕಾಸು ಸಲಹೆಗಾರರ ಮನೆಗಳ ಮೇಲೂ ದಾಳಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ವಿವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಠಾಕೂರ್ ಮತ್ತು ಲೆಕ್ಕಪತ್ರ ಅಧಿಕಾರಿ ಗೋಪಾಲ್ ಚತುರ್ವೇದಿ ಅವರನ್ನು ಬಂಧಿಸಲಾಗಿದೆ. ತನಿಖೆ ಸಹಕರಿಸದ ಆರೋಪದ ಮೇಲೆ ಬಂಧಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಬಂಧಿತರನ್ನು ಮುಂಬೈ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಮೂಲಗಳೂ ತಿಳಿಸಿವೆ.
ದಾಳಿಯ ವೇಳೆ ₹ 73 ಲಕ್ಷ ನಗದು, ಡಿಜಿಟಲ್ ಮತ್ತು ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.