ನವದೆಹಲಿ: ಹವಾಲಾ ಮೂಲಕ ಭಾರಿ ಹಣವನ್ನು ದುಬೈಗೆ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ಕೇರಳದ ಆಭರಣ ಸಮೂಹ ಜೋಯಾಲುಕ್ಕಾಸ್ ಮಾಲೀಕ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ ₹ 305 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.
ತನಿಖಾ ಸಂಸ್ಥೆಯು ಫೆ. 22 ರಂದು ತ್ರಿಶೂರ್ ನ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತ್ತು. ಮುಟ್ಟುಗೋಲು ಹಾಕಿಕೊಳ್ಳಲಾದ ಈ ಸ್ವತ್ತುಗಳ ಒಟ್ಟು ಮೌಲ್ಯ ₹305.84 ಕೋಟಿ.
ತ್ರಿಶ್ಶೂರ್‌ನ ಶೋಭಾ ನಗರದಲ್ಲಿ ಭೂಮಿ ಮತ್ತು ವಸತಿ ಕಟ್ಟಡ ಸೇರಿದಂತೆ 33 ಸ್ಥಿರಾಸ್ತಿಗಳು (ಮೌಲ್ಯ ₹81.54 ಕೋಟಿ ), ಮೂರು ಬ್ಯಾಂಕ್ ಖಾತೆಗಳು (₹91.22 ಲಕ್ಷ ಠೇವಣಿ), ₹ 5.58 ಕೋಟಿ ಮೂರು ಸ್ಥಿರ ಠೇವಣಿಗಳು ಮತ್ತು ಜೋಯಾಲುಕ್ಕಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಷೇರುಗಳು (₹217.81 ಕೋಟಿ ) ಜಪ್ತಿ ಮಾಡಲಾಗಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಿಂದ ದುಬೈಗೆ ಹವಾಲಾ (ಹಣ ಅಕ್ರಮ ವರ್ಗಾವಣೆ) ಮೂಲಕ ಭಾರಿ ಪ್ರಮಾಣದ ಹಣವನ್ನು ವರ್ಗಾಯಿಸಲಾಗಿದೆ ಮತ್ತು ನಂತರ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ ಮಾಲೀಕತ್ವದ ಕಂಪನಿಯಾದ ದುಬೈನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಎಲ್ಎಲ್‌ಸಿ ಯಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಶೋಧ ವೇಳೆ ಸಂಗ್ರಹಿಸಿದ ಪುರಾವೆಗಳು, ಅಧಿಕೃತ ದಾಖಲೆಗಳು ಮತ್ತು ಇಮೇಲ್‌ಗಳು ಹವಾಲಾ ವ್ಯವಹಾರಗಳಲ್ಲಿ ಜಾಯ್ ಅಲುಕ್ಕಾಸ್ ಸಕ್ರಿಯವಾಗಿ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ ಎಂದು ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.