ADVERTISEMENT

ಅಡುಗೆ ಎಣ್ಣೆಗಳ ಬೆಲೆ ಮತ್ತಷ್ಟು ಹೆಚ್ಚಳ?

ತಾಳೆ ಎಣ್ಣೆ ರಫ್ತಿಗೆ ಇಂಡೊನೇಷ್ಯಾ ನಿಷೇಧದ ಪರಿಣಾಮ

ವಿಜಯ್ ಜೋಷಿ
Published 24 ಏಪ್ರಿಲ್ 2022, 19:31 IST
Last Updated 24 ಏಪ್ರಿಲ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಾಳೆ ಎಣ್ಣೆ ರಫ್ತು ನಿಷೇಧಿಸಲು ಇಂಡೊನೇಷ್ಯಾ ತೀರ್ಮಾನಿಸಿರುವ ಪರಿಣಾಮವಾಗಿ ದೇಶದಲ್ಲಿ ಅಡುಗೆ ಎಣ್ಣೆ ಬೆಲೆಯು ತೀವ್ರವಾಗಿ ಏರಿಕೆ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ನಡುವೆ, ರಫ್ತು ನಿಷೇಧವನ್ನು ಇಂಡೊನೇಷ್ಯಾ ಹೆಚ್ಚು ಕಾಲ ಜಾರಿಯಲ್ಲಿ ಇರಿಸಲಿಕ್ಕಿಲ್ಲ ಎಂಬ ಆಶಾಭಾವನೆ ಕೂಡ ವರ್ತಕರಲ್ಲಿ ಇದೆ.

‘ರಫ್ತು ನಿಷೇಧ ತೀರ್ಮಾನ ಪ್ರಕಟವಾದ ತಕ್ಷಣ ದೇಶಿ ಸಗಟು ಮಾರುಕಟ್ಟೆಯಲ್ಲಿ ಪರಿಣಾಮ ಕಂಡುಬಂದಿದೆ. ತಾಳೆ ಎಣ್ಣೆ ಬೆಲೆಯು ಲೀಟರಿಗೆ ₹ 5ರಷ್ಟು ಜಾಸ್ತಿ ಆಗಿದೆ. ಇದು ಆಮದು ಮಾಡಿಕೊಳ್ಳುವವರು ಹಾಗೂ ಎಣ್ಣೆ ಸಂಸ್ಕರಣೆ ಮಾಡುವವರ ಮಟ್ಟದಲ್ಲಿ ಆಗಿರುವ ಹೆಚ್ಚಳ. ಚಿಲ್ಲರೆ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸ ಆಗಿಲ್ಲ. ಆದರೆ ರಫ್ತು ನಿಷೇಧದಿಂದ ಚಿಲ್ಲರೆ ಮಾರುಕಟ್ಟೆ ಮೇಲೆ ಪರಿಣಾಮ ಆಗುವುದಂತೂ ಖಂಡಿತ’ ಎಂದು ಅಡುಗೆ ಎಣ್ಣೆ ಉದ್ಯಮದ ಮೂಲಗಳು ತಿಳಿಸಿವೆ.

‘ದೇಶಿ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆ ಎಷ್ಟು ಹೆಚ್ಚಾಗಬಹುದು ಎಂಬುದನ್ನು ಈಗಲೇ ಅಂದಾಜು ಮಾಡಲು ಆಗದು. ಸ್ಪಷ್ಟ ಚಿತ್ರಣ ಸಿಗಲು ಒಂದು ವಾರವಾದರೂ ಬೇಕು. ನಾವು ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಗಳಲ್ಲಿ ತಾಳೆ ಎಣ್ಣೆಯ ಪ್ರಮಾಣವು ಶೇ 50ರಷ್ಟು ಇದೆ. ನಿರ್ಬಂಧದ ಪರಿಣಾಮವಾಗಿ ಜನ ಆತಂಕಕ್ಕೆ ಒಳಗಾಗಿ ಎಣ್ಣೆಯನ್ನು ಹೆಚ್ಚು ಖರೀದಿಸಿದರೆ ಲೀಟರಿಗೆ ಬೆಲೆಯು ತಕ್ಷಣಕ್ಕೆ ₹ 10ರವರೆಗೆ ಹೆಚ್ಚಳ ಆಗಬಹುದು’ ಎಂದು ಮೂಲವೊಂದು ‘ಪ್ರಜಾವಾಣಿ’ಗೆ ತಿಳಿಸಿದೆ.

ADVERTISEMENT

‘ರಷ್ಯಾ ಮತ್ತು ಉಕ್ರೇನ್ ಯುದ್ಧದ ಕಾರಣದಿಂದಾಗಿ ಸೂರ್ಯಕಾಂತಿ ಎಣ್ಣೆ ಬೆಲೆ ಹೆಚ್ಚಾಗಿದೆ. ಈಗ ತಾಳೆ ಎಣ್ಣೆ ರಫ್ತು ನಿಷೇಧದ ಕಾರಣದಿಂದಾಗಿ ಕೆಲವು ದಿನಗಳ ಮಟ್ಟಿಗೆ ಒಂದಿಷ್ಟು ಸಮಸ್ಯೆಯಾಗುವುದು ಖಂಡಿತ. ಆದರೆ, ತಾಳೆ ಎಣ್ಣೆ ರಫ್ತಿನಿಂದ ದೊಡ್ಡ ಆದಾಯ ಪಡೆಯುತ್ತಿರುವ ಇಂಡೊನೇಷ್ಯಾ, ಈ ನಿಷೇಧವನ್ನು ಹೆಚ್ಚು ದಿನ ಜಾರಿಯಲ್ಲಿ ಇರಿಸಿಕೊಳ್ಳಲಿಕ್ಕಿಲ್ಲ’ ಎಂದು ಬೆಂಗಳೂರಿನ ಕೃಷ್ಣಂ ಆಯಿಲ್‌ ಟ್ರೇಡರ್ಸ್‌ನ ವರ್ತಕ ಕೃಷ್ಣಂ ಶಶಿಧರ್ ಅಭಿಪ್ರಾಯಪಟ್ಟರು.

ನಿರ್ಬಂಧದ ಪ್ರಕಟಣೆ ಹೊರಬಿದ್ದ ನಂತರದಲ್ಲಿ ರಿಫೈನ್ಡ್‌ ತಾಳೆ ಎಣ್ಣೆ ಬೆಲೆಯು ದೇಶದ ಬಂದರುಗಳಲ್ಲಿ ಪ್ರತಿ 10 ಕೆ.ಜಿ.ಗೆ ₹ 1570ಕ್ಕೆ ತಲುಪಿದೆ. ಇದು ₹ 1,600 ಅಥವಾ ₹ 1,650ರ ಮಟ್ಟ ತಲುಪಬಹುದು ಎಂದು ಅಂದಾಜಿಸಿರುವುದಾಗಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.