ADVERTISEMENT

ಮೊಟ್ಟೆ ಧಾರಣೆ ಕುಸಿತ: ಹೆಚ್ಚಿದ ತಾಪಮಾನದಿಂದ ಬಳಕೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
ಕೋಳಿ ಮೊಟ್ಟೆ
ಕೋಳಿ ಮೊಟ್ಟೆ   

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ಮೊಟ್ಟೆ ಬಳಕೆ ಕಡಿಮೆಯಾಗುತ್ತಿದೆ. ಹಾಗಾಗಿ, ಸಗಟು ಮೊಟ್ಟೆ ಧಾರಣೆಯೂ ಇಳಿಕೆಯಾಗಿದೆ.

ಫೆಬ್ರುವರಿ ಮೊದಲ ವಾರದಲ್ಲಿ ಸಗಟು ದರ ₹600 (ಪ್ರತಿ 100 ಮೊಟ್ಟೆಗಳಿಗೆ) ಇತ್ತು. ಈ ತಿಂಗಳ ಅಂತ್ಯಕ್ಕೆ ₹520ಕ್ಕೆ ಕುಸಿದಿದೆ. ಒಟ್ಟಾರೆ 80 ಪೈಸೆಯಷ್ಟು ಇಳಿಕೆಯಾಗಿದೆ.

ಆದರೆ, ಚಿಲ್ಲರೆ ಅಂಗಡಿ ವ್ಯಾಪಾರಿಗಳು ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮನಸ್ಸು ಮಾಡಿಲ್ಲ. ಒಂದು ಮೊಟ್ಟೆಗೆ ₹6.50ರಿಂದ ₹7 ದರಕ್ಕೆ ಮಾರಾಟ ಮಾಡುತ್ತಿದ್ದಾರೆ. 

ADVERTISEMENT

ಜನವರಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದರಿಂದ ಕೇಕ್‌ಗಳ ತಯಾರಿಕೆಗೆ ಮೊಟ್ಟೆಗಳ ಬೇಡಿಕೆ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಮನೆ ಸೇರಿದಂತೆ ಹೋಟೆಲ್‌ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಉಳಿದಂತೆ ಬೇಸಿಗೆ ಅವಧಿಯಲ್ಲಿ ಬಳಕೆ ಪ್ರಮಾಣ ಕಡಿಮೆ ಇರುತ್ತದೆ. ಸಹಜವಾಗಿಯೇ ಧಾರಣೆಯೂ ಇಳಿಕೆಯಾಗುತ್ತದೆ ಎನ್ನುತ್ತಾರೆ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ಪ್ರತಿನಿಧಿಗಳು.

‘ಬಿಸಿಯೂಟ ಯೋಜನೆಯಡಿ ಸರ್ಕಾರವು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿದೆ. ಆದರೆ, ಬೇಸಿಗೆ ರಜೆ ವೇಳೆ ಶಾಲೆಗಳಿಗೆ ಮೊಟ್ಟೆ ಪೂರೈಕೆ ಸ್ಥಗಿತವಾಗಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಧಾರಣೆ ಮತ್ತಷ್ಟು ಇಳಿಕೆಯಾಗಬಹುದು’ ಎಂದು ಎನ್‌ಇಸಿಸಿಯ ಮೈಸೂರು ವಿಭಾಗದ ಮಾರಾಟ ಉತ್ತೇಜನ ವಿಭಾಗದ ಅಧಿಕಾರಿ ವಿ. ಶೇಷನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ಬೇಡಿಕೆ ಎಷ್ಟು?:

ಪ್ರಸ್ತುತ ದಾವಣಗೆರೆ, ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಮೈಸೂರು ಹಾಗೂ ಕೊಪ್ಪಳ ಜಿಲ್ಲೆ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಟ್ಟೆ ಕೋಳಿ ಸಾಕಾಣಿಕೆ ನಡೆಯುತ್ತಿದೆ.

ರಾಜ್ಯದಲ್ಲಿ ಪ್ರತಿನಿತ್ಯ 2.60 ಕೋಟಿಯಷ್ಟು ಮೊಟ್ಟೆಗಳಿಗೆ ಬೇಡಿಕೆಯಿದ್ದು, ಸದ್ಯ ಸುಮಾರು 2.20 ಕೋಟಿಯಷ್ಟು ಮೊಟ್ಟೆಗಳ ಉತ್ಪಾದನೆಯಾಗುತ್ತಿದೆ. ಉಳಿದಂತೆ ತಮಿಳುನಾಡಿನ ನಾಮಕ್ಕಲ್‌ನಿಂದ ನಿತ್ಯ 40 ಲಕ್ಷದಿಂದ 50 ಲಕ್ಷ ಮೊಟ್ಟೆಗಳು ಪೂರೈಕೆಯಾಗುತ್ತಿವೆ ಎನ್ನುತ್ತಾರೆ ಎನ್‌ಇಸಿಸಿ ಪ್ರತಿನಿಧಿಗಳು.

ಬೆಂಗಳೂರಿನಲ್ಲಿ ದಿನವೊಂದಕ್ಕೆ 90 ಲಕ್ಷದಷ್ಟು ಮೊಟ್ಟೆಗಳು ಬಳಕೆಯಾಗುತ್ತವೆ. ಅಲ್ಲದೆ, ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಇರುವ ಮೊಟ್ಟೆ ಪುಡಿ ಮಾಡುವ ಘಟಕಕ್ಕೆ ನಿತ್ಯ 7 ಲಕ್ಷ ಮೊಟ್ಟೆಗಳು ಪೂರೈಕೆ ಆಗುತ್ತವೆ. ಇಲ್ಲಿ ತಯಾರಾಗುವ ಪುಡಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ ಎಂದು ವಿವರಿಸುತ್ತಾರೆ. 

ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳು ಬೇಡಿಕೆಗೆ ಅನುಗುಣವಾಗಿ ಗೋವಾ, ಮಹಾರಾಷ್ಟ್ರ ಮತ್ತು ಕೇರಳಕ್ಕೂ ಪೂರೈಕೆಯಾಗುತ್ತವೆ ಎನ್ನುತ್ತಾರೆ ಅವರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮೊಟ್ಟೆಗಳ ಉತ್ಪಾದನಾ ಪ್ರಮಾಣ ಕಡಿಮೆ ಇದೆ. ಇದಕ್ಕೆ ಸರ್ಕಾರದ ನಿಯಮಾವಳಿಗಳೇ ಕಾರಣ. ತಮಿಳುನಾಡಿನಲ್ಲಿ ಬಿಸಿಯೂಟಕ್ಕೆ ಪ್ರತಿದಿನ 60 ಲಕ್ಷ ಮೊಟ್ಟೆಗಳನ್ನು ಪೂರೈಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಕೋಳಿ ಸಾಕಾಣಿಕೆದಾರರಿಗೆ ವಿದ್ಯುತ್‌ ಸಬ್ಸಿಡಿ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿಯೂ ಇಂತಹ ಸವಲತ್ತು ಕಲ್ಪಿಸಿದರೆ ಈ ವಲಯವು ಮತ್ತಷ್ಟು ಪ್ರಗತಿ ಕಾಣಲಿದೆ ಎಂಬುದು ಅವರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.